ಬೆಂಗಳೂರು: ಔಷಧಗಳ ಆನ್‌ಲೈನ್ ಮಾರಾಟ ಮತ್ತು ಕಾರ್ಪೊರೇಟ್ ಕಂಪನಿಗಳ ಅನಾರೋಗ್ಯಕರ ಸ್ಪರ್ಧೆಯನ್ನು ವಿರೋಧಿಸಿ ಮೇ 20 ರಂದು ದೇಶಾದ್ಯಂತ 24 ಗಂಟೆಗಳ ಕಾಲ ಮೆಡಿಕಲ್ ಅಂಗಡಿಗಳು ಸಂಪೂರ್ಣ ಬಂದ್ ಆಗಲಿವೆ.
‘ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್’ (AIOCD) ಕರೆ ನೀಡಿರುವ ಈ ಬೃಹತ್ ಮುಷ್ಕರಕ್ಕೆ ‘ಕರ್ನಾಟಕ ರಾಜ್ಯ ಕೆಮಿಸ್ಟ್ಸ್ ಮತ್ತು ಡ್ರಗಿಸ್ಟ್ಸ್ ಅಸೋಸಿಯೇಶನ್’ (KCDA) ಕೂಡ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಇದರ ಪರಿಣಾಮವಾಗಿ ಬೆಂಗಳೂರಿನ 26,000ಕ್ಕೂ ಹೆಚ್ಚು ಶಾಪ್‌ಗಳು ಸೇರಿದಂತೆ ರಾಜ್ಯ ಹಾಗೂ ದೇಶಾದ್ಯಂತ ಲಕ್ಷಾಂತರ ಔಷಧ ವ್ಯಾಪಾರ ಸ್ಥಗಿತಗೊಳ್ಳಲಿದೆ.
ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಾರ್ವಜನಿಕರು ತಮಗೆ ಅಗತ್ಯವಿರುವ ಜೀವ ರಕ್ಷಕ ಮತ್ತು ಅಗತ್ಯ ಔಷಧಗಳನ್ನು ಮುಂಚಿತವಾಗಿಯೇ ಖರೀದಿಸಿಟ್ಟುಕೊಳ್ಳುವಂತೆ ಔಷಧ ವ್ಯಾಪಾರಸ್ಥರ ಸಂಘ ಮನವಿ ಮಾಡಿದೆ.
ಪ್ರತಿಭಟನೆಗೆ ಪ್ರಮುಖ ಕಾರಣಗಳೇನು?
ಸ್ಥಳೀಯ ಔಷಧ ವ್ಯಾಪಾರಿಗಳು ಆನ್‌ಲೈನ್ ಫಾರ್ಮಸಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, ಬಂದ್‌ಗೆ ಈ ಕೆಳಗಿನ ಪ್ರಮುಖ ಕಾರಣಗಳನ್ನು ನೀಡಿದ್ದಾರೆ:
ಸ್ಥಳೀಯ ವ್ಯಾಪಾರಿಗಳಿಗೆ ಆರ್ಥಿಕ ಹೊಡೆತ: ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಕೇಂದ್ರ ಸರ್ಕಾರವು ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ಅನುಮತಿ ನೀಡಿತ್ತು. ಪ್ರಸ್ತುತ ಕಾರ್ಪೊರೇಟ್ ಆನ್‌ಲೈನ್ ಫಾರ್ಮಸಿಗಳು ಭಾರಿ ರಿಯಾಯಿತಿ (ಡಿಸ್ಕೌಂಟ್) ನೀಡಿ ಮನೆಗೇ ತಲುಪಿಸುತ್ತಿರುವುದರಿಂದ ಸಾಂಪ್ರದಾಯಿಕ ವ್ಯಾಪಾರಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಕಲಿ ಪ್ರಿಸ್ಕ್ರಿಪ್ಷನ್ ಹಾವಳಿ: ಇ-ಪೋರ್ಟಲ್‌ಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಬಳಸಿ ನಕಲಿ ವೈದ್ಯರ ಪ್ರಿಸ್ಕ್ರಿಪ್ಷನ್‌ಗಳನ್ನು ಸೃಷ್ಟಿಸಲಾಗುತ್ತಿದೆ. ಇದರ ಮೂಲಕ ಆ್ಯಂಟಿಬಯಾಟಿಕ್ ಹಾಗೂ ವ್ಯಸನಕ್ಕೆ ಕಾರಣವಾಗುವ ಅಪಾಯಕಾರಿ ಔಷಧಗಳನ್ನು ಸುಲಭವಾಗಿ ಪಡೆಯಲಾಗುತ್ತಿದ್ದು, ಇದು ಯುವ ಪೀಳಿಗೆಯನ್ನು ದುಶ್ಚಟಗಳಿಗೆ ತಳ್ಳುತ್ತಿದೆ.
ನಿಯಮಗಳ ಉಲ್ಲಂಘನೆ: ಔಷಧಗಳು ಸಾಮಾನ್ಯ ಗ್ರಾಹಕ ವಸ್ತುಗಳಲ್ಲ. ಅವುಗಳನ್ನು ಅರ್ಹ ಫಾರ್ಮಾಸಿಸ್ಟ್‌ಗಳ ಸಮ್ಮುಖದಲ್ಲಿ ಸುರಕ್ಷತಾ ನಿಯಮಗಳೊಂದಿಗೆ ನೀಡಬೇಕು. ಆದರೆ ಆನ್‌ಲೈನ್‌ನಲ್ಲಿ ಇಂತಹ ಯಾವುದೇ ನಿಯಮಗಳು ಪಾಲನೆಯಾಗುತ್ತಿಲ್ಲ.
ಮಾಹಿತಿ ಕೊರತೆ: ಸ್ಥಳೀಯ ಅಂಗಡಿಗಳು ನಿಯಮದಂತೆ ಯಾರಿಗೆ ಎಷ್ಟು ಔಷಧ ಮಾರಾಟ ಮಾಡಿದ್ದೇವೆ ಎಂಬ ಮಾಹಿತಿಯನ್ನು ಸರ್ಕಾರಕ್ಕೆ ನೀಡುತ್ತವೆ. ಆದರೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಇಂತಹ ಯಾವುದೇ ನಿಖರ ಮಾಹಿತಿಯನ್ನು ಹಂಚಿಕೊಳ್ಳುತ್ತಿಲ್ಲ.
ವ್ಯಾಪಾರಿಗಳ ಪ್ರಮುಖ ಬೇಡಿಕೆಗಳು:
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‌ಆರ್ 817 ಹಾಗೂ ಕೋವಿಡ್ ಅವಧಿಯಲ್ಲಿ ತರಲಾಗಿದ್ದ ನಿಯಮಗಳನ್ನು ತಕ್ಷಣ ಹಿಂಪಡೆಯಬೇಕು.
ಕಾರ್ಪೊರೇಟ್ ಕಂಪನಿಗಳ ತೀವ್ರ ರಿಯಾಯಿತಿ ತಡೆಗಟ್ಟಲು ಎಲ್ಲರಿಗೂ ಸಮಾನ ಅವಕಾಶ ನೀಡುವ ‘ಲೆವೆಲ್ ಪ್ಲೇಯಿಂಗ್ ಫೀಲ್ಡ್’ ನೀತಿ ಜಾರಿಗೊಳಿಸಬೇಕು.
ಎಚ್ಚರಿಕೆ: ಮೇ 20 ರಂದು ಔಷಧ ಅಂಗಡಿಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಸರ್ಕಾರ ಈಗಲೂ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ವ್ಯಾಪಾರಿಗಳ ಸಂಘಟನೆಗಳು ಎಚ್ಚರಿಸಿವೆ.








