ಉಡುಪಿ: ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ವಿರುದ್ಧ ಮಲ್ಪೆ ಠಾಣೆ ಪೋಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗೆ ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ ಘಟನೆಯ ಬಳಿಕ ನಡೆದ ವಿದ್ಯಮಾನಗಳನ್ನು ಖಂಡಿಸಿ ಮಲ್ಪೆ ಮೀನುಗಾರರ ಸಂಘ (ರಿ) ಮತ್ತು ಇತರ ಪ್ರಮುಖ ಮೀನುಗಾರಿಕಾ ಸಂಘಟನೆಗಳು ಈ ಪ್ರತಿಭಟನೆಯನ್ನು ಆಯೋಜಿಸಿದ್ದವು. ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಪ್ರಮೋದ್ ಮಧ್ವರಾಜ್ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಅವರ ವಿರುದ್ಧ ಮಲ್ಪೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮನೆಗೆ ಕಳ್ಳರು ಬಂದರೆ ನಾವು ಏನು ಮಾಡುತ್ತೇವೆ? ಪೊಲೀಸರು ಬರುವುದಕ್ಕೆ ಐದಾರು ಗಂಟೆ ತಡವಾದಲ್ಲಿ ನಾವು ಏನು ಮಾಡುತ್ತೇವೆ? ಕಳ್ಳರನ್ನು ಕಟ್ಟಿ ಹಾಕಲೇಬೇಕು? ತಲವಾರ್, ಮಚ್ಚಿನಲ್ಲಿ ಹೊಡೆದಿದ್ದೇವಾ? ಕೇವಲ ಕೆನ್ನೆಗೆ ಬಾರಿಸಿದ್ದೇವೆ ಎಂದು ಮಹಿಳೆಗೆ ಸಾರ್ವಜನಿಕವಾಗಿ ಕಟ್ಟಿಹಾಕಿ ಹೊಡೆದಿರುವುದನ್ನು ಸಮರ್ಥನೆ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಈ ಸಂಬಂಧ ಪೊಲೀಸರು ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 57, 191(1), ಮತ್ತು 192 ರ ಅಡಿಯಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 34/2025 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.