ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿರುವ ಆಸ್ತಿ ಮಾಲಿಕರು, ಸಾರ್ವಜನಿಕರು ಶೇ.5ರ ರಿಯಾಯಿತಿಯೊಂದಿಗೆ ತಮ್ಮ ಆಸ್ತಿಗಳ ತೆರಿಗೆಯನ್ನು ಪಾವತಿಸುವಂತೆ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿರುವ ಆಸ್ತಿ ಮಾಲಿಕರು ಸನ್ 2025-2026ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ 30ರ ಒಳಗೆ ಪಾವತಿ ಮಾಡಿದಲ್ಲಿ ಶೇ 5 ರಷ್ಟು ರಿಯಾಯಿತಿ ಇರುತ್ತದೆ ಹಾಗೂ ಮೇ-2025 ಹಾಗೂ ಜೂನ್-2025 ತಿಂಗಳಿನಲ್ಲಿ ಆಸ್ತಿ ತೆರಿಗೆ ಪಾವತಿಸಿದಲ್ಲಿ ಯಾವುದೇ ರೀತಿಯ ದಂಡ ಇರುವುದಿಲ್ಲ. ಜುಲೈ-2025 ತಿಂಗಳಿನಿಂದ ಪ್ರತಿ ತಿಂಗಳಿಗೆ ಶೇ.2 ರಷ್ಟು ದಂಡದೊಂದಿಗೆ ಆಸ್ತಿಕರ ಪಾವತಿಸಬೇಕಾಗಿರುತ್ತದೆ.
ಆಸ್ತಿ ಮಾಲಿಕರು, ಸಾರ್ವಜನಿಕರು ತಮ್ಮ ತಮ್ಮ ನಿವೇಶನಗಳು ಹಾಗೂ ಕಟ್ಟಡಗಳ ಆಸ್ತಿಕರವನ್ನು ಮೇ-2025ರ ಒಳಗಾಗಿ ತೆರಿಗೆಯನ್ನು ಪಾವತಿ ಮಾಡಿ ರಿಯಾಯಿತಿಯ ಸದುಪಯೋಗವನ್ನು ಪಡೆದುಕೊಳ್ಳಬೇಕು. ನೀರಿನ ತೆರಿಗೆ ಕಡ್ಡಾಯವಾಗಿ ಪಾವತಿಸಬೇಕು. ಅಲ್ಲದೇ ನಗರದಲ್ಲಿ ವಿವಿಧ ಉದ್ದಿಮೆಗಳನ್ನು ನಡೆಸುತ್ತಿರುವ ಉದ್ದಿಮೆದಾರರು ಕಡ್ಡಾಯವಾಗಿ ಉದ್ದಿಮೆ ಪರವಾನಿಗೆಯನ್ನು ಪಡೆದುಕೊಳ್ಳಬೇಕು ಹಾಗೂ ಉದ್ದಿಮೆ ಪರವಾನಿಗೆ ಪಡೆದುಕೊಂಡವರು 2025-2026ನೇ ಸಾಲಿಗೆ ನವೀಕರಣ ಮಾಡಿಕೊಳ್ಳಲು ಈ ಮೂಲಕ ಸೂಚಿಸಲಾಗಿದೆ. ಖಾಲಿ ನಿವೇಶನಗಳ ಮಾಲಿಕರುಗಳು ತಮ್ಮ ನಿವೇಶನಗಳಲ್ಲಿ ಕಸ ಮತ್ತು ತ್ಯಾಜ್ಯವಸ್ತು ಸಂಗ್ರಹವಾಗದಂತೆ ಸ್ವಚ್ಛವಾಗಿಟ್ಟುಕೊಳ್ಳುವಂತೆ ಕೊಪ್ಪಳ ನಗರಸಭೆ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.