ಹೈದರಾಬಾದ್: ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಪೊಲೀಸರು ನಡೆಸುವ ‘ಡ್ರಂಕ್ ಅಂಡ್ ಡ್ರೈವ್’ ತಪಾಸಣೆ ವೇಳೆ ಇನ್ನು ಮುಂದೆ ವಾಹನಗಳನ್ನು ಜಪ್ತಿ ಮಾಡುವಂತಿಲ್ಲ ಎಂದು ತೆಲಂಗಾಣ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮದ್ಯ ಸೇವಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ವಾಹನವನ್ನು ವಶಪಡಿಸಿಕೊಳ್ಳುವ ಅಧಿಕಾರ ಪೊಲೀಸರಿಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮೋಟಾರು ವಾಹನ ಕಾಯ್ದೆಯಡಿ ಪೊಲೀಸರಿಗೆ ಇರುವ ಮಿತಿಗಳನ್ನು ನೆನಪಿಸಿದ ನ್ಯಾಯಮೂರ್ತಿ ಇ.ವಿ. ವೇಣುಗೋಪಾಲ್ ಅವರು ಈ ಕುರಿತು ಕೆಲವು ಪ್ರಮುಖ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.
ಹೈಕೋರ್ಟ್ ನೀಡಿದ ಪ್ರಮುಖ ಸೂಚನೆಗಳು:
ಸೀಜ್ ಮಾಡುವ ಅಧಿಕಾರವಿಲ್ಲ: ಚಾಲಕ ಮದ್ಯದ ಅಮಲಿನಲ್ಲಿರುವುದು ದೃಢಪಟ್ಟರೆ ಚಟ್ಟದ ಪ್ರಕಾರ ದಂಡ ವಿಧಿಸಬಹುದು ಅಥವಾ ಕಾನೂನು ಕ್ರಮ ಜರುಗಿಸಬಹುದು. ಆದರೆ, ಆ ನೆಪದಲ್ಲಿ ವಾಹನವನ್ನು ಪೊಲೀಸ್ ಸ್ಟೇಷನ್ಗೆ ಕೊಂಡೊಯ್ಯುವಂತಿಲ್ಲ.
ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು: ಒಂದು ವೇಳೆ ವಾಹನದಲ್ಲಿ ಚಾಲಕ ಒಬ್ಬನೇ ಇದ್ದು, ಆತ ಚಲಾಯಿಸುವ ಸ್ಥಿತಿಯಲ್ಲಿ ಇಲ್ಲದಿದ್ದರೆ, ಪೊಲೀಸರು ತಕ್ಷಣ ಆತನ ಸಂಬಂಧಿಕರಿಗೆ ಅಥವಾ ಸ್ನೇಹಿತರಿಗೆ ಮಾಹಿತಿ ನೀಡಬೇಕು. ಅವರು ಬಂದು ವಾಹನವನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಬೇಕು.
ಲೈಸೆನ್ಸ್ ಇದ್ದವರಿಗೆ ಹಸ್ತಾಂತರ: ವಾಹನದಲ್ಲಿರುವ ಇತರ ಪ್ರಯಾಣಿಕರ ಬಳಿ ಚಾಲನಾ ಪರವಾನಗಿ (DL) ಇದ್ದು, ಅವರು ಮದ್ಯಪಾನ ಮಾಡದಿದ್ದರೆ, ಅವರಿಗೆ ವಾಹನವನ್ನು ಹಸ್ತಾಂತರಿಸಿ ಕಳುಹಿಸಿಕೊಡಬೇಕು.
ಪೊಲೀಸರ ಅತಿಯಾದ ಉತ್ಸಾಹಕ್ಕೆ ಕೋರ್ಟ್ ಚಾಟಿ!
ಅನೇಕ ಸಂದರ್ಭಗಳಲ್ಲಿ ಪೊಲೀಸರು ವಾಹನಗಳನ್ನು ಸೀಜ್ ಮಾಡಿ ಸ್ಟೇಷನ್ ಆವರಣದಲ್ಲಿ ನಿಲ್ಲಿಸುತ್ತಿದ್ದಾರೆ. ಇದರಿಂದ ಬಿಸಿಲು, ಮಳೆಗೆ ವಾಹನಗಳು ಹಾಳಾಗುತ್ತಿವೆ ಮತ್ತು ಸಾಮಾನ್ಯ ಜನರು ಅನಗತ್ಯ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಯಾರೂ ಇಲ್ಲದ ಪಕ್ಷದಲ್ಲಿ ವಾಹನವನ್ನು ಸುರಕ್ಷಿತವಾಗಿ ಪಾರ್ಕ್ ಮಾಡಿಸಬೇಕೇ ಹೊರತು, ಕಾನೂನುಬಾಹಿರವಾಗಿ ಜಪ್ತಿ ಮಾಡಬಾರದು ಎಂದು ಜಸ್ಟಿಸ್ ವೇಣುಗೋಪಾಲ್ ತಿಳಿಸಿದ್ದಾರೆ.
ಗಮನಿಸಿ: ಈ ತೀರ್ಪಿನ ಅರ್ಥ ಮದ್ಯಪಾನ ಮಾಡಿ ವಾಹನ ಚಲಾಯಿಸಬಹುದು ಎಂದಲ್ಲ. ಮದ್ಯ ಸೇವಿಸಿ ಸಿಕ್ಕಿಬಿದ್ದರೆ ಕಾನೂನುಬದ್ಧವಾಗಿ ದಂಡ ಪಾವತಿಸಲೇಬೇಕು. ಆದರೆ, ದಂಡದ ಹೆಸರಿನಲ್ಲಿ ವಾಹನವನ್ನು ಕಸಿದುಕೊಳ್ಳುವುದು ಸಂವಿಧಾನ ಬಾಹಿರ ಎಂದು ಕೋರ್ಟ್ ಹೇಳಿದೆ.
ಒಂದು ವೇಳೆ ಪೊಲೀಸರು ಈ ನಿಯಮ ಮೀರಿ ವಾಹನ ಸೀಜ್ ಮಾಡಿದರೆ, ಸಾರ್ವಜನಿಕರು ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿ ನ್ಯಾಯ ಪಡೆಯಬಹುದಾಗಿದೆ.








