ಬೆಂಗಳೂರು : ರಾಜ್ಯದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಪಂಚತಂತ್ರ ತಂತ್ರಾಂಶದಲ್ಲಿ ಇ-ಹಾಜರಾತಿ ದಾಖಲಿಸಲು ತಾಂತ್ರಿಕ ಸಮಸ್ಯೆಗಳು ಉಂಟಾದ ಸಂದರ್ಭಗಳಲ್ಲಿ ವೇತನ ಪಾವತಿಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ತಾಂತ್ರಿಕ ದೋಷಗಳಿಂದಾಗಿ ಇ-ಹಾಜರಾತಿಯನ್ನು ದಾಖಲಿಸಲು ಸಾಧ್ಯವಾಗದೇ ಇದ್ದಾಗ, ಅಂಥಹ ತಾಂತ್ರಿಕ ದೋಷಗಳನ್ನು ಪಂಚತಂತ್ರ 2.0 ನಲ್ಲಿ ಸರಿಪಡಿಸಲು ಹಾಗೂ ಪೂರ್ಣ ವೇತನ ಪಾವತಿಸುವಂತೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ (ರಿ), (ಸಿಐಟಿಯು ಸಂಯೋಜಿತ), ರವರು ಉಲ್ಲೇಖಿತ ಸಭೆಯಲ್ಲಿ ಮನವಿ ಸಲ್ಲಿಸಿರುತ್ತಾರೆ.
ಮುಂದುವರೆದು, ಪಂಚತಂತ್ರ 2.0 ತಂತ್ರಾಂಶದಲ್ಲಿ ಅಥವಾ ಮೊಬೈಲ್ ಆಪ್ ಮೂಲಕ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಇ-ಹಾಜರಾತಿಯನ್ನು ದಾಖಲಿಸಲು ತಾಂತ್ರಿಕ ಸಮಸ್ಯೆಗಳು ಉಂಟಾದ ಸಂದರ್ಭಗಳಲ್ಲಿ, ಇ-ಹಾಜರಾತಿಯನ್ನು ದಾಖಲಿಸದ ಕಾರಣಕ್ಕಾಗಿ ವೇತನವನ್ನು ಕಡಿತಗೊಳಿಸದೇ, ತಾಂತ್ರಿಕ ದೋಷ ಉಂಟಾಗಿರುವುದನ್ನು ದೃಢಪಡಿಸಿಕೊಂಡು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಿರುವುದನ್ನು ಖಚಿತಪಡಿಸಿಕೊಂಡು, ವೇತನವನ್ನು ಪಾವತಿಸಲು ಸೂಕ್ತ ಕ್ರಮವಹಿಸುವಂತೆ ಈ ಮೂಲಕ ತಿಳಿಸಲಾಗಿದೆ.









