ಬೆಂಗಳೂರು : ಇಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆ ಸರಿದಂತೆ ನಾಲ್ವರು ಆರೋಪಿಗಳ ಬಂಧನ ವಿಚಾರವಾಗಿ ಇದೀಗ ಜಿಗಣಿ ಪೊಲೀಸರಿಗೆ ಸ್ಪೋಟಕ ಮಾಹಿತಿ ಲಭ್ಯವಾಗಿದೆ.
ಜಿಗಣಿಯಲ್ಲಿ ಪಾಕ್ ಸೇರಿ ನಾಲ್ವರು ವಿದೇಶಿಗರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಗಣಿ ಪೊಲೀಸ್ ಠಾಣೆಗೆ ಐಬಿ ಅಧಿಕಾರಿಗಳು ಭೇಟಿ ನೀಡಿದ್ದು, ಆರೋಪಿಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಗುಪ್ತಚರ ಇಲಾಖೆ ಅಧಿಕಾರಿಗಳು ಪೊಲೀಸರಿಂದ ಆರೋಪಿಗಳ ಪೂರ್ವಾಪರ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಇದೀಗ ಜಿಗಣಿ ಪೊಲೀಸರು ಆರೋಪಿಗಳನ್ನು ಕೋರ್ಟಿಗೆ ಹಾಜರುಪಡಿಸಿದ್ದು 10 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣ ಹಿನ್ನೆಲೆ?
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನ ಪ್ರಜೆ ಸೇರಿಂದತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನ ಪ್ರಜೆ ರಷೀದ್ ಸಿದ್ದಿಕಿ ಅಲಿಯಾಸ್ ಶಂಕರ್ ಶರ್ಮಾ (48), ಆಯುಷಾ ಅನಿಫ್ ಅಲಿಯಾಸ್ ಆಶಾ ಶರ್ಮಾ (38), ಮೊಹಮ್ಮದ್ ಹನೀಫ್ ಅಲಿಯಾಸ್ ರಾಮ್ ಬಾಬಾ ಶರ್ಮಾ (73), ರುಬೀನಾ ಅಲಿಯಾಸ್ ರಾಣಿ ಶರ್ಮಾ (61) ಬಂಧಿತರು.
ಧರ್ಮದ ವಿಚಾರವಾಗಿ ರಷೀದ್ ಸಿದ್ದಿಕಿ ಅಲಿಯಾಸ್ ಶಂಕರ್ ಶರ್ಮಾನ್ನು ಪಾಕಿಸ್ತಾನದಿಂದ ಓಡಿಸಲಾಗಿತ್ತು. ಅಲ್ಲಿಂದ, ರಷೀದ್ ಸಿದ್ದಿಕಿ ಬಾಂಗ್ಲಾ ದೇಶಕ್ಕೆ ಹೋಗಿದ್ದನು. ಬಾಂಗ್ಲಾದಿಂದ ನೇಪಾಳಕ್ಕೆ ತೆರಳಿದ್ದನು. ನೇಪಾಳದಲ್ಲಿ ಮೆಹದಿ ಪೌಂಡೇಷನ್ ಸೇರಿಕೊಂಡಿದ್ದನು. ಧರ್ಮಗುರುಗಳ ಜೊತೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದನು. ನೇಪಾಳದಲ್ಲಿ ಮೆಹದಿ ಪೌಂಡೇಷನ್ ಧರ್ಮಗುರು ಯೂನಸ್ ಅಲ್ಗೋರ್ ಬೆಂಗಳೂರಿಗೆ ಹೋಗಿ ಧರ್ಮ ಪ್ರಚಾರ ಮಾಡುವಂತೆ ರಷೀದ್ ಸಿದ್ದಿಕಿ ಸೂಚನೆ ನೀಡಿದ್ದ ಎನ್ನಲಾಗಿದೆ.
ಈತನ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು, ರಷೀದ್ ಸಿದ್ದಿಕಿ ಜಿಗಣಿಯಲ್ಲಿ ವಾಸವಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಆಧರಿಸಿ, ಜಿಗಣಿ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಕುಟುಂಬ ಸಮೇತ ರಷೀದ್ ಸಿದ್ದಿಕಿಯನ್ನು ಬಂಧಿಸಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.