ಚನ್ನಪಟ್ಟಣ : ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಹೇಳಿಕೆ ನೀಡಿದ್ದು, ಶೀಘ್ರವೇ ನಮ್ಮ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಪಿಎಸ್ ವಿಚಾರವಾಗಿ ಸರ್ಕಾರದ ತೀರ್ಮಾನ ಏನು ಎಂದು ಕೇಳಿದಾಗ, ಈ ವಿಚಾರವಾಗಿ ನಾವು ಸಮಿತಿ ಮಾಡಿ ಯಾವ ರಾಜ್ಯಗಳಲ್ಲಿ ಇದನ್ನು ಜಾರಿ ಮಾಡಿದ್ದಾರೆ ಅಲ್ಲಿಗೆ ತಂಡ ಕಳುಹಿಸಿ ಅಧ್ಯಯನ ವರದಿ ಪಡೆಯಲಾಗುವುದು” ಎಂದರು.
ಇನ್ನು ಉಪಚುನಾವಣೆಯಲ್ಲಿ ಯೋಗೇಶ್ವರ್ ಅವರಿಗೆ ಟಿಕೆಟ್ ಸಿಗದಿದ್ದರೆ ಮೈತ್ರಿ ಮುರಿದು ಸ್ವತಂತ್ರ್ಯ ಸ್ಪರ್ಧೆ ಮಾಡಲಾಗುವುದು ಎಂಬ ಯೋಗೇಶ್ವರ್ ಅಭಿಮಾನಿಗಳ ಎಚ್ಚರಿಕೆ ಬಗ್ಗೆ ಕೇಳಿದಾಗ, “ಅವರ ಪಕ್ಷದ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಯಾವತ್ತಾದರೂ ಒಂದು ದಿನ ಅವರ ಮಧ್ಯೇ ಇದು ಇತ್ಯರ್ಥವಾಗಬೇಕು. ಅವರೇ ಮಾಡಿಕೊಳ್ಳಲಿ. ಅವರು ಏನಾದರೂ ಮಾಡಲಿ. ಈ ಭಾಗದ ಜನರ ಬದುಕಲ್ಲಿ ಬದಲಾವಣೆ ತರಬೇಕು. ನಮಗೆ ಅಧಿಕಾರ ಇದ್ದ ಕಾರಣ 7ನೇ ವೇತನ ಆಯೋಗ ಜಾರಿ ಮಾಡಿದ್ದೇವೆ. ಬಡವರಿಗೆ ನಿವೇಶನ ಹಂಚಲು 50 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ” ಎಂದು ತಿಳಿಸಿದರು.
ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ನಡುವಣ ತಿಕ್ಕಾಟದ ಬಗ್ಗೆ ಕೇಳಿದಾಗ, “ಅವರು ಈ ಹಿಂದೆಯೂ ಕಿತ್ತಾಡಿದ್ದರು. ಈಗ ಒಂದಾಗಿಲ್ಲವೇ? ಅವರು ಮತ್ತೆ ಒಂದಾಗುವುದಿಲ್ಲ ಎಂದು ಹೇಗೆ ಹೇಳಲು ಸಾಧ್ಯ. ಹೀಗಾಗಿ ನಾವು ಅವರ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದರು.