ಬೆಂಗಳೂರು : ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಜೋಡಣೆ ಮಾಡದ ರೈತರಿಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಸಿಹಿಸುದ್ದಿ ನೀಡಿದ್ದು, ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಜೋಡಣೆ ಮಾಡದ ರೈತರಿಗೆ ಸಹಾಯಧನ ಕಡಿತ ಮಾಡುವ ಚಿಂತನೆ ಇಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವ ಕೆ..ಜೆ. ಜಾರ್ಜ್, ರಾಜ್ಯದಲ್ಲಿರುವ 34 ಲಕ್ಷ ಕೃಷಿ ಪಂಪ್ ಸೆಟ್ ಗಳಲ್ಲಿ 32 ಲಕ್ಷ ಪಂಪ್ಸೆಟ್ ಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ. ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಜೋಡಣೆ ಬಗ್ಗೆ ರೈತರು ಆತಂಕ ಪಡುವ ಅಗತ್ಯವಿಲ್ಲ. ಶೇಕಡ 95.4 ರಷ್ಟು ಕೃಷಿ ಪಂಪ್ ಸೆಟ್ ಗಳಿಗೆ ಈಗಾಗಲೇ ಆಧಾರ್ ಜೋಡಣೆ ಮಾಡಲಾಗಿದೆ. ಆಧಾರ್ ಜೋಡಣೆಯ ಮೂಲಕ ದುರ್ಬಳಕೆ ತಡೆಯಬಹುದು. ಈ ಕುರಿತು ರೈತರಿಗೆ ಅರಿವು ಮೂಡಿಸಬೇಕಿದೆ. ಆಧಾರ್ ಜೋಡಣೆ ಬಗ್ಗೆ ರೈತರು ತಪ್ಪಾಗಿ ಅರ್ಥ ಮಾಡಿಕೊಳ್ಳುವುದು ಬೇಡ ಎಂದು ಹೇಳಿದ್ದಾರೆ.
10 ಹೆಚ್.ಪಿ. ವರೆಗಿನ ಕೃಷಿ ಪಂಪ್ ಸೆಟ್ ಗಳ ಸ್ಥಾವರಗಳ ಆಧಾರ್ ಜೋಡಣೆಯನ್ನು ಸೆ. 24ರೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಸಹಾಯಧನ ತಡೆಹಿಡಿಯುವುದಾಗಿ ಇಂಧನ ಇಲಾಖೆ ಸೂಚನೆ ನೀಡಿತ್ತು. ಆದರೆ ಯಾವುದೇ ಕಾರಣಕ್ಕೂ ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಜೋಡಣೆ ಮಾಡದ ರೈತರಿಗೆ ಸಹಾಯಧನ ಕಡಿತ ಮಾಡುವ ಚಿಂತನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.