ಬೆಂಗಳೂರು: ಮನೆ ಕಟ್ಟೋರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ ಕಡಿಮೆ ದರದಲ್ಲಿ ಮರಳು ಪೂರೈಕೆಗೆ ಸಮಗ್ರ ಮರಳು ನೀತಿ ಅನುಷ್ಠಾನಗೊಳಿಸಲಾಗಿದ್ದು, ಜಿಲ್ಲಾ ಮರಳು ಸಮಿತಿ ಮತ್ತು ಗ್ರಾಮ ಪಂಚಾಯಿತಿಗಳಿಂದ ಮರಳು ಬ್ಲಾಕ್ ಗಳ ವಿಲೇವಾರಿ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಕೈಗೆಟುಕುವ ದರದಲ್ಲಿ ಮರಳು ಸಿಗಲಿ ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಮರಳು ನೀತಿ ಜಾರಿಗೊಳಿಸಿದೆ. ಆಯವ್ಯಯದಲ್ಲಿ ಘೋಷಿಸಿದಂತೆ ಸಮಗ್ರ ಮರಳು ನೀತಿಯನ್ನು ಗಣಿ ಇಲಾಖೆ ಅನುಷ್ಠಾನಗೊಳಿಸಿದೆ.ಸಾರ್ವಜನಿಕರು ಹಾಗೂ ಸ್ಥಳೀಯ ಸರ್ಕಾರಿ ಕಾಮಗಾರಿಗಳಿಗೆ ನಿಗದಿತ ಕಡಿಮೆ ದರದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮರಳು ಪೂರೈಸಲು 1, 2 ಮತ್ತು 3ನೇ ಶ್ರೇಣಿಯ ಹಳ್ಳ ಪಾತ್ರಗಳಲ್ಲಿ ಲಭ್ಯವಿರುವ ಮರಳನ್ನು ತೆಗೆದು ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಗ್ರಾಪಂಗಳಿಗೆ ವಹಿಸಲಾಗುವುದು. ಪ್ರತಿ ಮೆಟ್ರಿಕ್ ಟನ್ ಮರಳಿನ ಮಾರಾಟ ಬೆಲೆಯನ್ನು 300 ರೂ. ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
4, 5 ಶ್ರೇಣಿಗಳ ಹಳ್ಳ, ನದಿ ಪಾತ್ರಗಳಲ್ಲಿ ಲಭ್ಯವಿರುವ ಮರಳು ಬ್ಲಾಕ್ ಗಳನ್ನು ಸರ್ಕಾರದಿಂದ ಅಧಿಸೂಚಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸರ್ಕಾರಿ ಇಲಾಖೆಗಳಿಗೆ ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ನೂತನ ನೀತಿಯಂತೆ ಮರಳು ಬ್ಲಾಕ್ ಗಳ ಟೆಂಡರ್ ಅನ್ನು ಆಯಾ ಜಿಲ್ಲಾ ಮರಳು ಸಮಿತಿಯಿಂದ ನಡೆಸಲಾಗುವುದು. ಜಿಲ್ಲಾವಾರು ಗುರುತಿಸಿದ ಮರಳು ಬ್ಲಾಕ್ ಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನ ಮತ್ತು ಇತರೆ ಸಾಮಾನ್ಯ ವರ್ಗದವರಿಗೆ ರೋಸ್ಟರ್ ಪದ್ಧತಿಯಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ರಾಜ್ಯಾದ್ಯಂತ ಪ್ರತಿ ಮೆಟ್ರಿಕ್ ಟನ್ ಮರಳು ಏಕರೂಪ ಮಾರಾಟ ದರ 850 ರೂ. ನಿಗದಿಪಡಿಸಲಾಗಿದೆ ಎಂದು ವಿವರಿಸಿದ್ದಾರೆ.