ಬೆಂಗಳೂರು: ಜನನ ಮತ್ತು ಮರಣಗಳ ನೋಂದಣಾಧಿಕಾರಿಗಳಿಗೆ ಕೇವಲ ದಾಖಲೆಗಳನ್ನು ನೀಡುವುದಷ್ಟೇ ಅಲ್ಲದೆ, ತಪ್ಪು ಮಾಹಿತಿಯನ್ನು ಸರಿಪಡಿಸುವ ಅಥವಾ ಅಗತ್ಯವಿದ್ದಾಗ ಬದಲಾವಣೆ ಮಾಡುವ ಅಧಿಕಾರವೂ ಇದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ:
ಲಿವ್-ಇನ್ ಸಂಬಂಧದಲ್ಲಿ ಜನಿಸಿದ ಹೆಣ್ಣು ಮಗುವಿನ ಹೆಸರಿನ ಜೊತೆಗಿದ್ದ ತಂದೆಯ ಉಪನಾಮವನ್ನು (Surname) ತೆಗೆದುಹಾಕಿ, ತನ್ನ ಹೆಸರನ್ನು (ತಾಯಿಯ ಹೆಸರು) ಸೇರಿಸಲು ಅನುಮತಿ ನೀಡುವಂತೆ ಮಹಿಳೆಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ಆದೇಶವನ್ನು ನೀಡಿದೆ.
ತಾಂತ್ರಿಕ ಕಾರಣ ನೀಡುವಂತಿಲ್ಲ: ಕೇವಲ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಇಂತಹ ಮನವಿಗಳನ್ನು ಅಧಿಕಾರಿಗಳು ನಿರಾಕರಿಸಬಾರದು.ಒಬ್ಬ ವ್ಯಕ್ತಿಯು ತನ್ನ ಹೆಸರನ್ನು ಅಥವಾ ತನ್ನ ಮಗುವಿನ ಹೆಸರನ್ನು ಬದಲಾಯಿಸಿಕೊಳ್ಳುವುದು ಅವರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸೇರಿದ್ದಾಗಿದೆ.ಸೂಕ್ತ ದಾಖಲೆಗಳನ್ನು ಒದಗಿಸಿದಾಗ ಹೆಸರು ಬದಲಾವಣೆಯನ್ನು ಮಾಡಿಕೊಡುವುದು ಸರ್ಕಾರದ ಕರ್ತವ್ಯವಾಗಿದೆ.
ಬೆಂಗಳೂರಿನ ಜನನ ಮತ್ತು ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಮಗುವಿನ ಜನನ ಪ್ರಮಾಣಪತ್ರದಲ್ಲಿ ಕೋರಲಾದ ಬದಲಾವಣೆಗಳನ್ನು ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಆದರೆ, ಹೊಸ ಪ್ರಮಾಣಪತ್ರ ನೀಡುವ ಮೊದಲು, ಈ ಬದಲಾವಣೆಯಿಂದ ಉಂಟಾಗಬಹುದಾದ ಯಾವುದೇ ಕಾನೂನು ಸಂಘರ್ಷಗಳಿಗೆ ಸರ್ಕಾರ ಹೊಣೆಯಲ್ಲ ಎಂಬ ಅಫಿಡವಿಟ್ ಅನ್ನು ತಾಯಿಯಿಂದ ಪಡೆಯಬೇಕು ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.








