ಬೆಂಗಳೂರು : ನರೇಗಾ ಯೋಜನೆಯಿಂದ ವಲಸೆ ತಡೆಗಟ್ಟುವಿಕೆ, ಮಹಿಳಾ ಸಬಲೀಕರಣ, ಕುಟುಂಬ ಕಲ್ಯಾಣ, ಗ್ರಾಮೀಣ ಆರ್ಥಿಕತೆಯ ಸುಧಾರಣೆಗಳು ಸಾಧ್ಯವಾಗುತ್ತಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಲವು ಗುರಿ ಮತ್ತು ಉದ್ದೇಶಗಳನ್ನು ಯಶಸ್ವಿಯಾಗಿ ಸಾಧಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನರೇಗಾ ಯೋಜನೆ ಮೂಲಕ ಗ್ರಾಮೀಣ ಭಾಗದ ಮಹಿಳೆಯರು ಪುರುಷರಿಗೆ ಸರಿಸಮಾನವಾದ ದುಡಿಮೆ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಮಹಿಳಾ ಸಬಲೀಕರಣದ ಕನಸು ಈ ಮೂಲಕ ಸಾಕಾರಗೊಳ್ಳುತ್ತಿದೆ. ಅಭಿವೃದ್ಧಿಯುಕ್ತ ಗ್ರಾಮ ಭಾರತದ ನಿರ್ಮಾಣದೆಡೆಗಿನ ಹೆಜ್ಜೆಯೂ ದೃಢವಾಗುತ್ತಿದೆ ಎಂದು ಹೇಳಿದ್ದಾರೆ.
ನರೇಗಾ ಯೋಜನೆ ಲಾಭವನ್ನು ಪಡೆಯುವುದರಲ್ಲಿ ಮಹಿಳೆಯರು ಮುಂದಿದ್ದು, ಒಟ್ಟು 24.95 ಲಕ್ಷಕ್ಕೂ ಅಧಿಕ ನರೇಗಾ ಉದ್ಯೋಗ ಕಾರ್ಡ್ ಹೊಂದಿದ್ದಾರೆ. ಶೇಕಡಾ 53.51 ರಷ್ಟು ಮಹಿಳೆಯರು ನರೇಗಾ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದು ಮೇಲುಗೈ ಸಾಧಿಸಿದ್ದಾರೆ. ಮಹಿಳೆಯರಿಗೆ ನರೇಗಾ ಯೋಜನೆಯು ಆರ್ಥಿಕ ಹಾಗೂ ಸ್ವಾವಲಂಬನೆಯ ಸಾಮಾಜಿಕ ಬಲ ನೀಡುತ್ತಿರುವುದಕ್ಕೆ ಇದು ಸಾಕ್ಷಿ ಎಂದರು.
ಹೆಣ್ಣುಮಕ್ಕಳಿಗೆ ದುಡಿಯುವ ಅವಕಾಶಗಳನ್ನು ಒದಗಿಸಿದರೆ ಅವರು ಎಲ್ಲ ಅಡೆತಡೆಗಳನ್ನು ಮೀರಿ ಸಾಧಿಸಬಲ್ಲರು. ಮಹಿಳಾ ಸಬಲೀಕರಣದ ಗುರಿಗೆ ನರೇಗಾ ಯೋಜನೆ ಭದ್ರ ಬುನಾದಿಯಾಗಿದೆ. ಔದ್ಯೋಗಿಕ ವಲಯದಲ್ಲಿ ಇನ್ನಷ್ಟು ಮಹಿಳೆಯರ ಪಾಲ್ಗೊಳ್ಳುವಿಕೆಗೆ ಇದು ಸ್ಫೂರ್ತಿಯಾಗಲಿ ಎಂದು ಹೇಳಿದ್ದಾರೆ.