ಮೈಸೂರು : ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕರಿಯ ಎಂದು ಹೇಳಿಕೆ ನೀಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಕೊನೆಗೂ ಕ್ಷಮೆಯಾಚಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಕರಿಯ ಎಂದು ಕರೆದಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. ಜೆಡಿಎಸ್ ಮುಖಂಡರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಕುಮಾರಸ್ವಾಮಿಗೆ ನಾನು ಮೊದಲಿನಿಂದಲೂ ಕರಿಯಣ್ಣ ಅಂತಿದ್ದೆ. ಕುಮಾರಸ್ವಾಮಿ ಕೂಡ ನನ್ನನ್ನು ಕುಳ್ಳ ಅಂತಿದ್ರು ಎಂದರು.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಬಣ್ಣದ ಬಗ್ಗೆ ಸಚಿವ ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ವಿರುದ್ಧ ಜೆಡಿಎಸ್ (JDS) ಕಿಡಿಕಾರಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದೆ.
ಈ ಕುರಿತು ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್, ಜಮೀರ್ ಅಹ್ಮದ್ ಅವರೇ, ಹೆಚ್.ಡಿ. ಕುಮಾರಸ್ವಾಮಿ ಅವರು ಜಾತಿ, ಪಂಥ ಮತ್ತು ಬಣ್ಣದಿಂದ ಜನನಾಯಕರಾಗಿ ಬೆಳೆದಿಲ್ಲ. ಅವರ ನಾಯಕತ್ವ ಗುಣ, ಸಮಾಜಕ್ಕೆ ಮತ್ತು ಸಮುದಾಯಗಳ ಅಭಿವೃದ್ಧಿಗೆ ಕೊಟ್ಟಿರುವ ಕೊಡುಗೆಗಳು, ಜನಪರ ಯೋಜನೆಗಳು ಮತ್ತು ಉತ್ತಮವಾದ ಆಡಳಿತ ಮತ್ತು ಆರ್ಥಿಕ ಅಭಿವೃದ್ಧಿ ದೃಷ್ಟಿಕೋನದಿಂದಲೇ ಉತ್ತಮ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ ಎಂದಿದೆ.