ಬೆಂಗಳೂರು : ಉಪಹಾರ ಕೇಂದ್ರಗಳು ಮತ್ತು ಹೋಟೆಲ್ಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದ್ದು, ಇದನ್ನು ನಿಷೇಧಿಸಲಾಗಿದೆ. ಇನ್ನೇರಡು ದಿನಗಳಲ್ಲಿ ಅಧಿಕೃತ ಸುತ್ತೊಲೆ ನೀಡಲಾಗುವುದು. ಈ ಮೊದಲು ಇಡ್ಲಿ ತಯಾರಿಕೆಗೆ ಹತ್ತಿ ಬಟ್ಟೆ ಬಳಕೆ ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಹೆಚ್ಚಿನ ಹೋಟೆಲ್ಗಳಲ್ಲಿ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಪ್ಲಾಸ್ಟಿಕ್ ಬಳಕೆಯಿಂದ ಸಾರ್ವಜನಿಕರು ಸೇವಿಸುವ ಇಡ್ಲಿಯಲ್ಲಿ ಕಾರ್ಸಿನೋಜೆನಿಕ್ ಅಂಶ ಮಿಶ್ರಣವಾಗುತ್ತಿದೆ. ಇದು ಆರೋಗ್ಯಕ್ಕೆ ಮಾರಕ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ 52 ಆಹಾರ ಉತ್ಪಾದಕರಿಗೆ ನೋಟಿಸ್ ನೀಡಲಾಗಿದ್ದು, ರಾಜ್ಯದಲ್ಲಿ ಆಹಾರ ಬೇಯಿಸಲು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗುವುದು. ಅಲ್ಲದೆ, ಹಸಿರು ಬಟಾಣಿಗಳಲ್ಲಿ ರಾಸಾಯನಿಕ ಬಳಕೆ ಕುರಿತು 31 ಮಾದರಿ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 26 ಅಸುರಕ್ಷಿತ ಎಂದು ದೃಢಪಟ್ಟಿದೆ ಎಂದರು.
ಈ ವರ್ಷದ ಜನವರಿಯಿಂದ ವಿವಿಧ ಹೋಟೆಲ್, ಮಳಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳ ಬಳಿಯಿಂದ ಒಟ್ಟು 3608 ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ 26 ಮಾದರಿ ಅಸುರಕ್ಷಿತ ಹಾಗೂ 28 ತೀರಾ ಕಳಪೆ ಎಂಬುದು ತಿಳಿದುಬಂದಿದೆ. ಜನವರಿಯಲ್ಲಿ 681 ರಷ್ಟು ಇಡ್ಲಿ ಮಾದರಿ ಪಡೆಯಲಾಗಿದೆ. ಇಡ್ಲಿ ಮಾಡುವಾಗ ಪ್ಲಾಸಿಕ್ ಬಳಸುತ್ತಿರುವುದು ಗಮನಕ್ಕೆ ಬಂದಿದೆ. 52 ಆಹಾರ ಉತ್ಪಾದಕರಿಗೆ ನೋಟಿಸ್ ನೀಡಲಾಗಿದೆ. ಆಹಾರ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಹಾಳೆ ಬಳಕೆ ನಿಷೇಧಿಸಿಲಾಗುವುದು ಎಂದು ಹೇಳಿದರು.