ಬೆಂಗಳೂರು : ರಾಜ್ಯದಲ್ಲಿ ಸ್ಮಶಾನ ಮತ್ತು ಕಬರಸ್ತಾನಗಳಿಗೆ ಜಮೀನು ಒದಗಿಸಲು ಆದ್ಯತೆ ನೀಡಬೇಕು.ಸರ್ಕಾರಿ ಜಮೀನು ಲಭ್ಯವಿಲ್ಲದ ಕಡೆ ಖಾಸಗಿ ಜಮೀನು ಖರೀದಿ ಮಾಡಿ ಒದಗಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಸಿಇಒಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ಆರೋಗ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ, ವಸತಿ ಸೇರಿದಂತೆ ವಿವಿಧ ಇಲಾಖೆಗಳ ಬಗ್ಗೆ ಸತತ 9 ಗಂಟೆಗಳ ಕಾಲ ಸುಧೀರ್ಘ ಸಭೆ ನಡೆಸಿದ್ದಾರೆ.
ಹಾಸ್ಟೆಲ್ಗಳಿಗೆ ನಿವೇಶನ ಗುರುತಿಸುವ ಸಂದರ್ಭದಲ್ಲಿ ಊರಿನಿಂದ ಬಹಳ ದೂರವಿರುವ ನಿರ್ಜನ ಪ್ರದೇಶದಲ್ಲಿ ನೀಡಬಾರದು. ನಿವೃತ್ತ ಸೈನಿಕರಿಗೆ ನಿವೇಶನ ಕುರಿತಾದ ಅರ್ಜಿಗಳನ್ನು ಆದಷ್ಟು ಬೇಗನೆ ವಿಲೇವಾರಿ ಮಾಡಿ ಅವರಿಗೆ ಜಮೀನು ಒದಗಿಸಬೇಕು. ಪ್ರತಿ ತಾಲೂಕಿನಲ್ಲಿ ಲಭ್ಯವಿರುವ ಸರ್ಕಾರಿ ಜಮೀನಿನ ಸಂಪೂರ್ಣ ಮಾಹಿತಿ ಲಭ್ಯವಿದ್ದು, ಒತ್ತುವರಿಯಾಗಿದ್ದರೆ ಅದನ್ನು ತಕ್ಷಣ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಸೈನಿಕರ ಕಲ್ಯಾಣ ನಿಗಮ ಸ್ಥಾಪಿಸುವ ಕುರಿತಾದ ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟದಲ್ಲಿ ಮಂಡಿಸುವಂತೆ ಮುಖ್ಯಮಂತ್ರಿ ಅವರು ಸೂಚನೆ ನೀಡಿದರು. ಒಟ್ಟು 59 ತಾಲೂಕುಗಳಲ್ಲಿ ಕ್ರೀಡಾಂಗಣಗಳು ಲಭ್ಯವಿಲ್ಲ. ಎಲ್ಲಾ ತಾಲೂಕುಗಳಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಜಮೀನು ಗುರುತಿಸಿ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದರು.
ಯುವನಿಧಿ ಯೋಜನೆಯಡಿ ಪ್ರತಿ ಫಲಾನುಭವಿಗೆ ಎರಡು ವರ್ಷಗಳ ಅವಧಿಗೆ ನೆರವು ನೀಡಲಾಗುತ್ತಿದ್ದು, ಈ ಅವಧಿಯಲ್ಲಿ ಫಲಾನುಭವಿಗಳಿಗೆ ಉದ್ಯೋಗ ದೊರೆತರೆ ಅಥವಾ ಉನ್ನತ ಶಿಕ್ಷಣಕ್ಕೆ ತೆರಳಿದರೆ ನೆರವು ಸ್ಥಗಿತಗೊಳ್ಳುತ್ತದೆ. ಪ್ರತಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ ಅವರ ಬೆಳವಣಿಗೆ ಮೇಲೆ ನಿಗಾ ವಹಿಸಬೇಕು.
ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತವಾಗುವ ಅರ್ಜಿಗಳನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕು. ಅರ್ಜಿಗಳನ್ನು ಕಾಟಾಚಾರಕ್ಕೆ ವಿಲೇವಾರಿ ಮಾಡದೆ ಅರ್ಜಿಗಳಿಗೆ ನ್ಯಾಯ ಒದಗಿಸಬೇಕು ಎಂದು ತಿಳಿಸಿದ್ದಾರೆ.