ಮೈಸೂರು: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿನ ಮಹಾ ಕುಂಭಮೇಳದ ಬೆನ್ನಲ್ಲೇ ಕರ್ನಾಟಕದಲ್ಲೂ ಇಂದಿನಿಂದ 3 ದಿನ ಕುಂಭಮೇಳ ನಡೆಯಲಿದೆ. ಭಕ್ತರಿಗೆ ಪುಣ್ಯ ಸ್ನಾನ ಮಾಡಲು 5 ಕಡೆ ಸ್ಥಳ ಗುರುತು ಮಾಡಲಾಗಿದೆ.
ಮೈಸೂರು ಜಿಲ್ಲಾಡಳಿತ ಹಾಗೂ ಕುಂಭಮೇಳ ಆಚರಣಾ ಸಮಿತಿ ಸಹಯೋಗದೊಂದಿಗೆ 13ನೇ ಕುಂಭಮೇಳವನ್ನು ಫೆ.10, 11 ಮತ್ತು 12 ರಂದು ಜಿಲ್ಲೆಯ ಟಿ. ನರಸೀಪುರದ ಶ್ರೀ ಕ್ಷೇತ್ರ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಆಯೋಜಿಸಲಾಗಿದೆ. ಫೆ.10ರ ಬೆಳಗ್ಗೆ 8.30ಕ್ಕೆ ಶ್ರೀ ಅಗಸ್‌ತ್ಯೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಅನುಜ್ಞಾ ಕಾರ್ಯಕ್ರಮ, ಅಂಕುರಾರ್ಪಣೆ ಮತ್ತು ಧ್ವಜಾರೋಹಣ ನೆರವೇರಲಿದೆ. ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್ .ಸಿ.ಮಹದೇವಪ್ಪ ಧ್ವಜಾರೋಹಣನೆರವೇರಿಸಿ, ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಫೆ.11ರಬೆಳಗ್ಗೆ 11ಕ್ಕೆಧಾರ್ಮಿಕಸಭೆಯನ್ನು ಏರ್ಪಡಿಸಲಾಗಿದ್ದು, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಉದ್ಘಾಟಿಸುವರು. ಸಚಿವರಾದ ಮಹದೇವಪ್ಪ, ಎಂ.ಬಿ.ಪಾಟೀಲ್, ದಿನೇಶ್ ಗುಂಡೂರಾವ್, ಡಾ.ಎಂ.ಸಿ.ಸುಧಾಕರ್ ಭಾಗವಹಿಸುವರು. ಫೆ.12ರ ಮಧ್ಯಾಹ್ನ 12ಕ್ಕೆ ಧರ್ಮಸಭೆಯನ್ನು ಏರ್ಪಡಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಸಮಾರೋಪ ಭಾಷಣ ಮಾಡುವರು.
ಭದ್ರತೆಗಾಗಿ 1,500 ಪೊಲೀಸರ ನಿಯೋಜನೆ
ಇಂದಿನಿಂದ ಟಿ.ನರಸೀಪುರದ ತ್ರಿವೇಣಿ ಸಂಗಣದಲ್ಲಿ ಕುಂಭಮೇಳ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಕುಂಭಮೇಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆಗಾಗಿ 1,500 ಪೊಲೀಸರನ್ನು ನಿಯೋಜಿಸಲಾಗಿದೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮಾದರಿಯಲ್ಲೇ ಕರ್ನಾಟಕದ ಟಿ.ನರಸೀಪುರದ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಕುಂಭಮೇಳ ನಡೆಯಲು ಅಂತಿಮ ಹಂತದ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ರಾಜ್ಯ, ಹೊರ ರಾಜ್ಯಗಳಿಂದ ಟಿ.ನರಸೀಪುರದ ಕುಂಭಮೇಳದಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ಮೈಸೂರು ಜಿಲ್ಲಾಡಳಿತ, ಟಿ.ನರಸೀಪುರ ತಾಲ್ಲೂಕು ಹಾಗೂ ಪೊಲೀಸ್ ಇಲಾಖೆ ಈಗಾಗಲೇ ಎಲ್ಲಾ ಸಿದ್ಧತೆಯನ್ನು ಕೈಗೊಂಡಿದೆ.
ಇಂದಿನಿಂದ ಟಿ.ನರಸೀಪುರದ ಕುಂಭಮೇಳಕ್ಕೆ ಭದ್ರತೆಗಾಗಿ ನಾಲ್ವರು ಹೆಚ್ಚುವರಿ ಎಸ್ಪಿ, ಹತ್ತು ಡಿವೈಎಸ್ಪಿ, 25 ಇನ್ಸ್ ಪೆಕ್ಟರ್, 80 ಸಬ್ ಇನ್ಸ್ ಪೆಕ್ಟರ್, 70 ಎಎಸ್ಐ, 600 ಮಂದಿ ಹೆಡ್ ಕಾನ್ ಸ್ಟೇಬಲ್, 9 ಡಿಎಆರ್ ತುಕಡಿ, 4 ಕೆ ಎಸ್ ಆರ್ ಪಿ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಅಂದಹಾಗೇ 6 ವರ್ಷಳ ಬಳಿಕ ಮೈಸೂರು ಜಿಲ್ಲೆಯ ಟಿ.ನರಸೀಪುರದ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಕುಂಭಮೇಳ ನಡೆಯುತ್ತಿದೆ. 1989ರಿಂದಲೂ ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತಿತ್ತು. 2021ರಲ್ಲಿ ಕೋವಿಡ್ ಕಾರಣದಿಂದ ಕುಂಭಮೇಳ ನಡೆದಿರಲಿಲ್ಲ. ಈ ಬಾರಿ 13ನೇ ಕುಂಭಮೇಳ ನಡೆಯುತ್ತಿದೆ.