ಕೊಡಗು:ಅಖಿಲ ಭಾರತೀಯ ಸಂತ ಸಮಿತಿ ಮತ್ತು ವಿಶ್ವ ಹಿಂದೂ ಪರಿಷತ್ತಿನಿಂದ ತಲಕಾವೇರಿಯ ಬ್ರಹಮ್ ಕುಂಡಿಕೆಯಿಂದ ಕಾವೇರಿ ತೀರ್ಥವನ್ನು ಸಂಗ್ರಹಿಸಿ ಅಯೋಧ್ಯೆಯ ರಾಮ ಮಂದಿರಕ್ಕೆ ಕಳುಹಿಸಿಕೊಡಲಾಗಿದೆ.
ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ತೀರ್ಥವನ್ನು ಸಂಗ್ರಹಿಸಲಾಗಿದ್ದು ಅರ್ಚಕರು ತೀರ್ಥವನ್ನು ರಾಮ ಮಂದಿರಕ್ಕೆ ರವಾನಿಸಿದ್ದಾರೆ.ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗಲಿದೆ.
ರಾಜ್ಯದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ.ಅಂದು ಶ್ರೀ ರಾಮನ ವಿಗ್ರಹ ಪ್ರತಿಷ್ಟಾಪನೆ ಆಗಲಿದ್ದು ಅದೇ ಸಮಯದಲ್ಲಿ ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಜನವರಿ 22 ರಂದು ಮಧ್ಯಾಹ್ನ 12 ಗಂಟೆ 29 ನಿಮಿಷ 8 ಸೆಕೆಂಡ್ ನಿಂದ 12 ಗಂಟೆ 32 ನಿಮಿಷಗಳವರೆಗೆ ಮಹಾಮಂಗಳಾರತಿ ಹಾಗೂ ವಿಶೇಷ ಪೂಜೆ ನೆರವೇರಿಸುವಂತೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದರು.