ಬೆಂಗಳೂರು : ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಗಳು ಶುಕ್ರವಾರ ಮುಕ್ತಾಯಗೊಂಡಿದ್ದು, ಏಪ್ರಿಲ್ 15ರಿಂದ ರಾಜ್ಯಾದ್ಯಂತ ಸುಮಾರು 240ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಮೌಲ್ಯಮಾಪನ ಆರಂಭವಾಗಿದ್ದು, ಮೇ 2ನೇ ವಾರದಲ್ಲಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆಗಳಿವೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಮಂಗಳವಾರದಿಂದ ಆರಂಭಗೊಂಡಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯುತ್ತಿದ್ದು, 35 ಜಿಲ್ಲೆಗಳ ಸರಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಬಾಗವಹಿಸುತ್ತಿದ್ದು, ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಮರುಮೌಲ್ಯಮಾಪನ/ಮರುಪರಿಶೀಲನೆ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಮಂಡಳಿಯ ಅರ್ಜಿ ನಮೂನೆಯನ್ನು ಆನ್ ಲೈನ್ ಅಥವಾ ಆಫ್ ಲೈನ್ ಮೋಡ್‌ನಲ್ಲಿ ಅಗತ್ಯ ಶುಲ್ಕದೊಂದಿಗೆ ಸಲ್ಲಿಸಬಹುದು.
ಪರೀಕ್ಷೆ-1 ರಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗದಿದ್ದರೆ ಅಥವಾ ಉತ್ತಮ ಅಂಕಗಳು ಬರದಿದ್ದರೆ ಪರೀಕ್ಷೆ- 2 ಮತ್ತು 3ರನ್ನು ಬರೆದು ಉತ್ತೀರ್ಣರಾಗಲು ಅವಕಾಶ ನೀಡಲಾಗಿದೆ. ಈ ಪರೀಕ್ಷೆಗಳು ಜೂನ್ ಮತ್ತು ಜುಲೈ ತಿಂಗಳಲ್ಲಿ ನಡೆಯಲಿವೆ. ಒಟ್ಟು 2818 ಕೇಂದ್ರಗಳಲ್ಲಿ 8.96 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದಾರೆ. 6 ವಿಷಯಗಳಿಂದ ವಿದ್ಯಾರ್ಥಿಗಳ 55 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಯಲಿದೆ.