ಬೆಂಗಳೂರು : ಹೈಕೋರ್ಟ್‌ಗೆ ಮೇ.5 ರ ನಾಳೆಯಿಂದ ಮೇ 31ರವರೆಗೆ ಬೇಸಿಗೆ ರಜೆ ಇರಲಿದ್ದು, ಕೋರ್ಟ್ ಕಲಾಪಗಳು ಜೂ.2ರಿಂದ ಪುನರಾರಂಭವಾಗಲಿವೆ.
ರಜೆ ಅವಧಿಯಲ್ಲಿ ತುರ್ತು ಅರ್ಜಿಗಳ ವಿಚಾರಣೆಗೆ ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ಮೇ 6, 8, 13, 15, 20, 22, 27 ಮತ್ತು 29ರಂದು ರಜಾಕಾಲದ ಪೀಠಗಳು ಕಾರ್ಯ ನಿರ್ವಹಿಸಲಿವೆ. ರಜೆ ಅವಧಿಯಲ್ಲಿ ಬೆಂಗಳೂರು ಮತ್ತು ಧಾರವಾಡ ಪೀಠಗಳು ಬೆಳಗ್ಗೆ 10.30ರಿಂದ ಕಲಾಪ ಆರಂಭಿಸಿದರೆ, ಕಲಬುರಗಿ ಪೀಠ ಬೆಳಿಗ್ಗೆ 8ಕ್ಕೆ ಕಾರ್ಯಾರಂಭಗೊಳ್ಳಲಿದೆ. ಈ ಅವಧಿಯಲ್ಲಿ ಕಾರ್ಯ ನಿರ್ವಹಿಸುವ ರಜಾಪೀಠಗಳಿಗೆ ನ್ಯಾಯಮೂರ್ತಿಗಳನ್ನು ನಿಯೋಜಿಸಿ ಸಿಜೆ ಸೂಚನೆ ಮೇರೆಗೆ ರಿಜಿಸ್ಟ್ರಾರ್ ಜನರಲ್ ಆದೇಶ ಹೊರಡಿಸಿದ್ದಾರೆ.
ರಜೆ ಅವಧಿ ಯಲ್ಲಿ ಯಾವುದೇ ಮೇಲ್ಮನವಿ ಹಾಗೂ ಹಳೆಯ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಳ್ಳುವುದಿಲ್ಲ. ಕೇವಲ ತುರ್ತು ಅರ್ಜಿಗಳನ್ನು ಮಾತ್ರ ವಿಚಾರಣೆಗೆ ಪರಿಗಣಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.