ಬೆಂಗಳೂರು : ರಾಜ್ಯದ 9 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣ ಇಲಾಖೆ 2024 ನೇ ಸಾಲಿನ ಕಲೋತ್ಸವ ಸ್ಪರ್ಧೆ ಆಯೋಜಿಸಲು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಕಲಾ ಉತ್ಸವ ಕಾರ್ಯಕ್ರಮ ಶಾಲಾ ಶಿಕ್ಷಣ ಇಲಾಖೆಯ ಒಂದು ಉಪಕ್ರಮವಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವಾಲಯ, (MoE) ಭಾರತ ಸರ್ಕಾರ ಶಿಕ್ಷಣದಲ್ಲಿ ಕಲೆಗಳನ್ನು ಪೋಷಿಸಲು ಹಾಗೂ ಉತ್ತೇಜಿಸಲು ಕಲೋತ್ಸವ ಕಾರ್ಯಕ್ರಮವನ್ನು – 2015 ರಲ್ಲಿ ಪ್ರಾರಂಭಿಸಿ, ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಮತ್ತು ಅದರ ರೋಮಾಂಚಕ ವೈವಿಧ್ಯತೆಯ ಬಗ್ಗೆ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಲು, ಶಾಲಾ ವಿದ್ಯಾರ್ಥಿಗಳಲ್ಲಿರುವ ಕಲಾ ಸೌಂದರ್ಯದ ಮಹತ್ವವನ್ನು ಗುರುತಿಸಿ, ಅವರಲ್ಲಿರುವ ಕಲಾತ್ಮಕ ಪ್ರತಿಭೆಯನ್ನು ಕಲೋತ್ಸವ ಕಾರ್ಯಕ್ರಮದ ಮೂಲಕ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರದರ್ಶಿಸಲು ಅವಕಾಶ ನೀಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ದೇಶದ ಕಲೆ ಮತ್ತು ಸಂಸ್ಕೃತಿಯ ಪ್ರಚಾರಕ್ಕೆ ಹೆಚ್ಚು ಒತ್ತು ನೀಡುತ್ತದೆ.
ಉದ್ದೇಶಗಳು:-
ವಿದ್ಯಾರ್ಥಿಗಳು ತಮ್ಮ ಕಲಾತ್ಮಕತೆಯನ್ನು ಅನ್ವೇಷಿಸಲು, ಅರ್ಥ ಮಾಡಿಕೊಳ್ಳಲು ಮತ್ತು ಪ್ರದರ್ಶಿಸಲು ಸಹಾಯ ಮಾಡುವುದು.
ವಿದ್ಯಾರ್ಥಿಗಳಲ್ಲಿ ಕಲಾತ್ಮಕ ಪ್ರತಿಭೆಯನ್ನು ಹಾಗೂ ಸಾಂಸ್ಕೃತಿಕ ತಿಳುವಳಿಕೆಯನ್ನು ಬೆಳಸುವುದು.
ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹಾಗೂ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅವಕಾಶ, ಉತ್ತಮ ವೇದಿಕ ಮತ್ತು ವಾತಾವರಣ ಒದಗಿಸುವುದು.
ವಿದ್ಯಾರ್ಥಿಗಳಲ್ಲಿ ಅರಿವಿನ ಹಾಗೂ ಸೃಜನ ಶೀಲ ಸಾಮರ್ಥ್ಯವನ್ನು ಹೆಚ್ಚಿಸುವುದು. ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವುದು.
ಪ್ರಸ್ತುತ ವರ್ಷದ ಕಲಾ ಪ್ರಕಾರಗಳು
ಎನ್.ಸಿ.ಇ.ಆರ್.ಟಿ ನವದೆಹಲಿ ಹಾಗೂ ಶಾಲಾ ಶಿಕ್ಷಣ ಸಚಿವಾಲಯ ಭಾರತ ಸರ್ಕಾರವು ಪ್ರಸ್ತುತ ಸಾಲಿನ ಕಲೋತ್ಸವದಲ್ಲಿ ಈ ಕೆಳಕಂಡ ಸಾಂಪ್ರದಾಯಿಕ/ಶಾಸ್ತ್ರೀಯ/ಜಾನಪದ ಶೈಲಿಯ ಕಲಾ ಪ್ರಕಾರಗಳನ್ನು ಪ್ರದರ್ಶಿಸಲು ಅವಕಾಶ ನೀಡಿದೆ.
1. ಗಾಯನ ಸಂಗೀತ ಶಾಸ್ತ್ರೀಯ ವೈಯಕ್ತಿಕ/ ಜಾನಪದ ಅಥವಾ ಬುಡಕಟ್ಟು ವೈಯಕ್ತಿಕ/ ಭಕ್ತಿಪ್ರಧಾನ ವೈಯಕ್ತಿಕ ಅಥವಾ ಸಾಮೂಹಿಕ ಗುಂಪು(ಗರಿಷ್ಠ 5 ಜನ ವಿದ್ಯಾರ್ಥಿಗಳು)/ ಜಾನಪದ ಅಥವಾ ಬುಡಕಟ್ಟು ಗುಂಪು/ ಭಕ್ತಿಪ್ರಧಾನ ಗುಂಪು/ ದೇಶಭಕ್ತಿ ಗುಂಪು,
2. ವಾದ್ಯ ಸಂಗೀತ ಶಾಸ್ತ್ರೀಯ ವ್ಯಯಕ್ತಿಕ(ಮಲೋಡಿಕ್ ಮತ್ತು ತಾಳವಾದ್ಯ), ಆರ್ಕೆಸ್ಟ್ರಾ ಮೇಳ (ಜಾನಪದ ಅಥವಾ ಶಾಸ್ತ್ರೀಯ)
3. ನೃತ್ಯ
ಶಾಸ್ತ್ರೀಯ ನೃತ್ಯ ವೈಯಕ್ತಿಕ, ಪ್ರಾದೇಶಿಕ ಜಾನಪದ/ಬುಡಕಟ್ಟು ಗುಂಪು, ಸಮಕಾಲಿನ ನೃತ್ಯ ಸಂಯೋಜನೆ ಗುಂಪು(ಚಲನ ಚಿತೇತರ)
4. ರಂಗಕಲೆ
ಮೊನೊ ಅಕ್ಕಿಂಗ್/ಮಿಮಿಕ್ರಿ ಸೋಲೋ ಅಥವಾ ಮೈಮ್ ಗುಂಪು / ನಾಟಕ ಗುಂಪು.
5. ದೃಶ್ಯಕಲೆಗಳು 2 ಆಯಾಮ ಅಥವಾ 3 ಆಯಾಮ ಸ್ಥಳೀಯ ಆಟಿಕೆಗಳು ಮತ್ತು ಆಟಗಳು ಅಥವಾ ಸ್ಥಳೀಯ ಕರಕುಶಲ ವಸ್ತುಗಳು.
6. ಸಾಂಪ್ರದಾಯಿಕ ಕಥೆ ಹೇಳುವಿಕೆ ಯಾವುದೇ ಸಾಂಪ್ರಾದಾಯಿಕ ಶೈಲಿ
ಅರ್ಹತೆ:
ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ 9ರಿಂದ 12ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಕಲಾ ಉತ್ಸವವು ‘ದಿವ್ಯಾಂಗ’ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ. ಒಬ್ಬ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಒಂದು ಕಲೆ ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸತಕ್ಕದ್ದು. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಯನ್ನು ಆನ್‌ಲೈನ್ ಮೂಲಕ ನಡೆಸಲಾಗುವುದು. ರಾಷ್ಟ್ರ ಮಟ್ಟದ ಸ್ಪರ್ಧೆಯನ್ನು ಆಫ್‌ಲೈನ್ ಮೂಲಕ ನಡೆಸಲಾಗುವುದು. ಹಿಂದಿನ ವರ್ಷಗಳಲ್ಲಿ ರಾಷ್ಟ್ರಮಟ್ಟದ ಕಲೋತ್ಸವ ಕಾರ್ಯಕ್ರಮದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ವಿಜೇತರಾದ ವಿದ್ಯಾರ್ಥಿಗಳು ಪ್ರಸ್ತುತ ಸಾಲಿನ ಕಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹರಿರುವುದಿಲ್ಲ.
ಕಾರ್ಯಕ್ರಮ ಅನುಷ್ಠಾನ ಪ್ರಕ್ರಿಯೆ:
ಶಾಲಾ ಹಂತ
ಇದು ಕಲೋತ್ಸವದ ಪ್ರಥಮ ಹಂತವಾಗಿದೆ. ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ 2024-25ನೇ ಸಾಲಿನ ಕಲೋತ್ಸವದ ಮಾರ್ಗಸೂಚಿಯಂತೆ ಮಾರ್ಗದರ್ಶನ ನೀಡುವುದು ಹಾಗೂ ವಿದ್ಯಾರ್ಥಿಗಳು ಸ್ಪರ್ಧೆಯ ನಿಯಮಗಳನ್ನು ತಿಳಿದುಕೊಂಡು ತಮ್ಮ ಕಲಾ ಪ್ರಕಾರವನ್ನು (ಪ್ರದರ್ಶನ ಮತ್ತು ರಚನೆ) 5 (30MB) https://sdcedn.karnataka.gov.in ವೆಬ್‌ಸೈಟ್‌ನಲ್ಲಿರುವ ಲಿಂಕ್‌ನಲ್ಲಿ ತಮ್ಮ ಮೊಬೈಲ್ ಸಂಖ್ಯೆ ಹಾಗೂ ಗುರುತಿನ (ಸ್ಯಾಟ್ಸ್) ಸಂಖ್ಯೆಯನ್ನು ನಮೂದಿಸಿ, ತಮ್ಮ ಪ್ರಸ್ತುತಿಯನ್ನು ಹಾಗೂ ಪ್ರಸ್ತುತಿಯ ಕುರಿತು ಸಾರಾಂಶವನ್ನು 100 ಪದಗಳಿಗೆ ಮೀರದಂತೆ ಕಂಪ್ಯೂಟರ್ ವರ್ಡ್ ಡಾಕ್ಯುಮೆಂಟ್ ರೂಪದಲ್ಲಿ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಟೈಪ್ ಮಾಡಿ ಕೊಟ್ಟಿರುವ ಸೂಕ್ತ ಸ್ಥಳದಲ್ಲಿ ದಿನಾಂಕ:22.11.2024 ರೊಳಗೆ ಅಪ್‌ಲೋಡ್ ಮಾಡಲು ಕ್ರಮ ವಹಿಸುವುದು. (ಕಲೆಯ ಸ್ಥಳ, ಮೂಲ, ಅದರ ಅಭ್ಯಾಸದಲ್ಲಿ ತೊಡಗಿರುವ ಸಮುದಾಯಗಳು, ಯಾವ ವಿಶೇಷ ಸಂದರ್ಭಗಳಲ್ಲಿ ಕಲಾಪ್ರಕಾರವನ್ನು ತಯಾರಿಸಲಾಗುವುದು/ಪ್ರದರ್ಶಿಸಲಾಗುತ್ತದೆ. ವೇಷಭೂಷಣಗಳು, ಜೊತೆಯಲ್ಲಿರುವ ವಾದ್ಯಗಳು, ಪರಿಸರದೊಂದಿಗೆ ಅದರ ಸಂಪರ್ಕ, ಅದರ ಶೈಲಿ, ತಂತ್ರಗಳು, ಯಾವ ವಸ್ತುಗಳನ್ನು ಬಳಸಲಾಗುತ್ತದೆ. ಇತ್ಯಾದಿಗಳನ್ನೊಳಗೊಂಡ ಕಲಾ ಪ್ರಕಾರ ಕುರಿತು ಸಾರಾಂಶವನ್ನು ಛಾಯಚಿತ್ರದೊಂದಿಗೆ ಸಲ್ಲಿಸುವುದು) ಪ್ರಸ್ತುತಿಯನ್ನು ಅಪ್‌ಲೋಡ್ ಮಾಡಿದ ಕೂಡಲೇ ವಿದ್ಯಾರ್ಥಿಗಳಿಗೆ ಮೊಬೈಲ್ ಸಂದೇಶ ತಲುಪುವುದು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಪ್ರಮಾಣಪತ್ರವನ್ನು ಪಡೆಯಲು ಸೂಚಿಸುವುದು.