ಬೆಂಗಳೂರು: ರಸ್ತೆ ಅಪಘಾತಕ್ಕೊಳಗಾದ ಸವಾರ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲವೆಂದ ಮಾತ್ರಕ್ಕೆ ಘಟನೆಗೆ ಆತನ ನಿರ್ಲಕ್ಷ್ಯವೇ ಸಂಪೂರ್ಣ ಕಾರಣವೆನ್ನಲಾಗದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಶಿವೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಚಿಲಕೂರು ಸುಮಲತಾ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಪಘಾತಕ್ಕೆ ಇನ್ನೊಂದು ವಾಹನ ಸವಾರ ನೇರ ಕಾರಣ ಎಂಬುದನ್ನು ಒಪ್ಪಿಕೊಳ್ಳಲು ಅರ್ಜಿದಾರರು ಸಾಕಷ್ಟು ಪುರಾವೆಗಳನ್ನೂ ನ್ಯಾಯಪೀಠದ ಮುಂದೆ ಪ್ರಸ್ತುತಪಡಿಸಿದರು. ಹೀಗಿರುವಾಗ, ಅವರು ಚಾಲನಾ ಪರವಾನಗಿ ಹೊಂದಿಲ್ಲವೆಂಬ ಕಾರಣಕ್ಕೆ ಅವರ ನಿರ್ಲಕ್ಷ್ಯದಿಂದಲೇ ಘಟನೆ ಸಂಭವಿಸಿದೆ ಎನ್ನುವುದು ಸರಿಯಲ್ಲ,’ ಎಂದು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಅರ್ಜಿದಾರರಿಗಾದ ನಷ್ಟದ ಅನುಸಾರ 5,67,000 ರೂ. ಪಾವತಿಸು ವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಗೊಳಿಸಿ ಆದೇಶಿಸಿದೆ.
2015ರ ಜನವರಿ 4ರಂದು ಶಿವೇಗೌಡ ಸಂಬಂಧಿಕರೊಬ್ಬರೊಂದಿಗೆ ಬೈಕ್ನಲ್ಲಿ ಚನ್ನರಾಯಪಟ್ಟಣದ ಹಿರೇಹಳ್ಳಿ ಗ್ರಾಮದ ಸಮೀಪ ಜೋಡಿಗಟ್ಟೆಯ ಹಾಲಿನ ಡೇರಿ ಬಳಿ ತೆರಳುತ್ತಿದ್ದಾಗ ಬೇರೊಂದು ದ್ವಿಚಕ್ರ ವಾಹನ ಅವರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಕೆಳಗೆ ಬಿದ್ದ ಅವರು ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಅವರು ಪರಿಹಾರ ನೀಡುವಂತೆ ಚನ್ನರಾಯಪಟ್ಟಣ ಮೋಟಾರು ವಾಹನ ಪರಿಹಾರ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧಿಕರಣ ಘಟನೆ ಸಂಭವಿಸಲು ಶೇಕಡಾ 25 ರಷ್ಟು ಮೇಲ್ಮನವಿದಾರರು ಕಾರಣ ಎಂದು ತೀರ್ಪು ನೀಡಿ, ಪರಿಹಾರ ನೀಡಲು ನಿರಾಕರಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.