ಬೆಂಗಳೂರು : 2023-24ನೇ ಸಾಲಿನಲ್ಲಿ 1 ರಿಂದ 9ನೇ ತರಗತಿ ಓದುತ್ತಿದ್ದು 2024-25ನೇ ಸಾಲಿನಲ್ಲಿ 2 ರಿಂದ 10ನೇ ತರಗತಿಗೆ ದಾಖಲಾಗದಿರುವ ಮಕ್ಕಳ ಮಾಹಿತಿ ಸಲ್ಲಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, 2023-24ನೇ ಸಾಲಿನಲ್ಲಿ 1 ರಿಂದ 9ನೇ ತರಗತಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳು 2024-25ನೇ ಸಾಲಿನಲ್ಲಿ 2 ರಿಂದ 10ನೇ ತರಗತಿಗೆ ದಾಖಲಾಗಬೇಕಿತ್ತು. ಆದರೆ ದಾಖಲಾತಿ ಅಂಕಿ-ಅಂಶಗಳನ್ನು ಪರಿಶೀಲಿಸಲಾಗಿ ಸುಮಾರು 28,904 ಮಕ್ಕಳು ದಾಖಲಾತಿ ಹೊಂದದೇ ಇರುವುದನ್ನು ಗಮನಿಸಲಾಗಿದೆ. ಈ ಕುರಿತಂತೆ ಸಮಗ್ರವಾಗಿ ಪರಿಶೀಲಿಸಿ ಸೂಕ್ತ ವಿವರಣೆಯೊಂದಿಗೆ ಶಾಲಾವಾರು ಮಾಹಿತಿಯನ್ನು ನೀಡುವಂತೆ ಸೂಚಿಸಿದೆ. ದಾಖಲಾತಿ ಹೊಂದದೆ ಇರುವ ಮಕ್ಕಳ ಮಾಹಿತಿಯನ್ನು ಪರಿಶೀಲಿಸಿ ದಿನಾಂಕ:30-10-2024ರೊಳಗೆ ತಪ್ಪದೇ ಸಲ್ಲಿಸುವುದು.
ಈ ಪತ್ರದೊಂದಿಗೆ 1ನೇ ತರಗತಿಯಿಂದ 2ನೇ ತರಗತಿಗೆ ದಾಖಲಾದ ಮಕ್ಕಳ ಪಟ್ಟಿಯನ್ನು ನಮೂನೆ-1 ಮತ್ತು 2ನ್ನು ಲಗತ್ತಿಸಿದ್ದು ಅದೇ ನಮೂನೆಯಲ್ಲಿ ಎಲ್ಲ ವರ್ಗಗಳ 2 ರಿಂದ 10ನೇ ತರಗತಿಯ ಮಕ್ಕಳ ಮಾಹಿತಿಯು ವರ್ಗವಾರು ತಯಾರಿಸಿ ನಮೂನೆ 2 ರಲ್ಲಿನ ದೃಢೀಕೃತ ನಮೂನೆಯನ್ನು ಶಾಲಾವಾರು ಸಿದ್ಧಮಾಡಿ ನಮೂನೆ 3 ರಲ್ಲಿ ಎಲ್ಲಾ ವರ್ಗ (2 ರಿಂದ 10) ಗಳ ಕ್ರೋಢೀಕೃತ ನಮೂನೆಗಳನ್ನು ಬ್ಲಾಕ್/ಜಿಲ್ಲಾ ಹಂತದ ವರದಿಯನ್ನು ದಿನಾಂಕ:30-10-2024 ರೊಳಗೆ ತಪ್ಪದೇ ಸಲ್ಲಿಸಲು ತಿಳಿಸಿದೆ.