ಬೆಂಗಳೂರು : ಗ್ರಾಮ ಪಂಚಾಯತಿಗಳಲ್ಲಿ ಯುವಜನರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತ್ತು ಗ್ರಾಮ ಮಟ್ಟದಲ್ಲಿ ಯುವ ಜನರ ಸಬಲೀಕರಣಕ್ಕಾಗಿ “ಪ್ರತಿ ವರ್ಷ ಜನವರಿ 12 ರಿಂದ 19ನೇ ದಿನಾಂಕದೊಳಗೆ ಯುವಜನ ಗ್ರಾಮ ಸಭೆ” ನಡೆಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಪ್ರತಿ ವರ್ಷ ಜನವರಿ 12 ರಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಯುವಜನೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. 12 ಜನವರಿ 2022 ರಿಂದ 18 ನೇ ಜನವರಿ 2022 ರವರೆಗೆ ರಾಜ್ಯಾದ್ಯಾಂತ “ಯುವ ಸಪ್ತಾಹ” ಆಚರಿಸಲು ಮತ್ತು ವಿಶೇಷ ಯುವ ಗ್ರಾಮ ಸಭೆಯನ್ನು ಕಡ್ಡಾಯವಾಗಿ ಆಯೋಜಿಸುವಂತೆ ಎಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು. ತಾಲ್ಲೂಕು ಪಂಚಾಯತ್ ಮತ್ತು ಎಲ್ಲಾ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಉಲ್ಲೇಖಿತ ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 3-ಹೆಚ್ ರಡಿ ಯುವ ಜನರ ಅಭಿವೃದ್ಧಿಗಾಗಿ ವಿಶೇಷ ಗ್ರಾಮ ಸಭೆಯನ್ನು ಗ್ರಾಮ ಪಂಚಾಯತಿಗಳು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಗ್ರಾಮೀಣ ಜನರ ಜೀವನ ಗುಣಮಟ್ಟವನ್ನು ಉತ್ತಮಪಡಿಸುವಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯು ನಿರ್ಣಾಯಕ ಪಾತ್ರ ವಹಿಸುತ್ತದೆ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಯುವ ಜನರನ್ನು ವಿಶೇಷವಾಗಿ ಗುರುತಿಸುವ ಮತ್ತು ಅವರನ್ನು ಗ್ರಾಮದ ಅಭಿವೃದ್ಧಿಯಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ಯುವಕರನ್ನು ಒಳಗೊಂಡ ದೂರದೃಷ್ಟಿ ಯೋಜನೆ ಸಂಬಂಧಿತ ಗ್ರಾಮ ಸಭೆಯನ್ನು ಸಂಯೋಜಿಸಿ ಯುವಜನರಿಗೆ ದೊರಕಬಹುದಾದ ಅನುಕೂಲತೆಗಳು ಹಾಗು ಸೌಲಭ್ಯಗಳ ಕುರಿತು ಚರ್ಚಿಸಿ ಮಾಹಿತಿ ನೀಡುವ ಅವಶ್ಯಕತೆ ಇರುವುದರಿಂದ ಯುವ ಜನ ಗ್ರಾಮ ಸಭೆಯನ್ನು ಕರೆಯುವುದು ಅವಶ್ಯವಾಗಿರುತ್ತದೆ.
ಆದುದರಿಂದ ಗ್ರಾಮ ಪಂಚಾಯತಿಗಳಲ್ಲಿ ಯುವ ಜನರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತ್ತು ಗ್ರಾಮ ಮಟ್ಟದಲ್ಲಿ ಯುವಜನರ ಸಬಲೀಕರಣಕ್ಕಾಗಿ “ಪ್ರತಿ ವರ್ಷ ಜನವರಿ 12 ರಿಂದ 19ನೇ ದಿನಾಂಕದೊಳಗೆ ಯುವಜನ ಗ್ರಾಮ ಸಭೆ” ಕಡ್ಡಾಯವಾಗಿ ನಡೆಸಲು ಹಾಗೂ ಈ ಸಭೆಯಲ್ಲಿ ಗ್ರಾಮಾಭಿವೃದ್ಧಿಯಲ್ಲಿ ಯುವ ಜನತೆ ತೊಡಗಿಸಿಕೊಳ್ಳುವ ಬಗ್ಗೆ ಮತ್ತು ಅವರುಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಕ್ತ ಅವಕಾಶ ನೀಡಲು ಕ್ರಮ ಕೈಗೊಳ್ಳುವಂತೆ ಎಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತ್ ಮತ್ತು ಎಲ್ಲಾ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದೆ.









