ಬೆಂಗಳೂರು : ರಾಷ್ಟ್ರಲಾಂಛನವನ್ನು “ಸತ್ಯಮೇವ ಜಯತೆ” ಧೈಯವಾಕ್ಯದೊಂದಿಗೆ ಸಂಪೂರ್ಣವಾಗಿ ಪ್ರದರ್ಶಿಸುವ ಕುರಿತು ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಭಾರತದ ರಾಷ್ಟ್ರಲಾಂಛನವನ್ನು ಅಧಿಕೃತ ಉದ್ದೇಶಗಳಿಗೆ ಬಳಸಲು ಅಧಿಕಾರ ಹೊಂದಿರುವ ಕೆಲವು ಸರ್ಕಾರಿ ಏಜೆನ್ಸಿಗಳು ರಾಷ್ಟ್ರ ಲಾಂಛನದ ಸಿಂಹ ಮುಕುಟದ ಚಿತ್ರದ ಕೆಳಗೆ ದೇವನಾಗರಿ ಲಿಪಿಯಲ್ಲಿ ಬರೆದಿರುವ ಸತ್ಯಮೇವ ಜಯತೆ’ ಧೈಯ ವಾಕ್ಯವನ್ನು ಬಳಸದಿರುವುದು ಕಂಡುಬಂದಿರುತ್ತದೆ. ಇದು ರಾಷ್ಟ್ರಲಾಂಛನದ ಅಪೂರ್ಣ ಪ್ರದರ್ಶನವಾಗಿದ್ದು, ಭಾರತದ ರಾಷ್ಟ್ರಲಾಂಛನ (ಅನುಚಿತ ಬಳಕೆ ನಿಷೇಧ) ಅಧಿನಿಯಮ, 2005 ಮತ್ತು ಭಾರತದ ರಾಷ್ಟ್ರ ಲಾಂಛನ (ಬಳಕೆಯ ನಿಯಂತ್ರಣ) ನಿಯಮಗಳು, 2007ರ ಉಲ್ಲಂಘನೆಯಾಗುತ್ತದೆಯೆಂದು ಉಲ್ಲೇಖಿತ ಪತ್ರದಲ್ಲಿ ತಿಳಿಸಲಾಗಿದೆ. ಆದ್ದರಿಂದ, “ಸತ್ಯಮೇವ ಜಯತೆ” ಧೈಯವಾಕ್ಯವನ್ನು ಹೊಂದಿರುವ ರಾಷ್ಟ್ರಲಾಂಛನದ ಪೂರ್ಣ ಚಿತ್ರವನ್ನು ಬಳಸಬೇಕೆಂದು ಈ ಮೂಲಕ ಮತ್ತೊಮ್ಮೆ ತಿಳಿಸಲಾಗಿದೆ.
ಮುಂದುವರೆದು, ಹಲವು ಕಡೆಗಳಲ್ಲಿ ಅನಧಿಕೃತ ವ್ಯಕ್ತಿಗಳು / ಸಂಸ್ಥೆಗಳು ರಾಷ್ಟ್ರಲಾಂಛನವನ್ನು ಮುದ್ರಣ ಸಾಮಗ್ರಿ ಹಾಗೂ ವಾಹನಗಳ ಮೇಲೆ ಬಳಸುತ್ತಿರುವುದು ಕಂಡು ಬಂದಿರುತ್ತದೆ. ಭಾರತದ ರಾಷ್ಟ್ರ ಲಾಂಛನ (ಅನುಚಿತ ಬಳಕೆ ನಿಷೇಧ) ಅಧಿನಿಯಮ, 2005 ಮತ್ತು ಭಾರತದ ರಾಷ್ಟ್ರಲಾಂಛನ (ಬಳಕೆಯ ನಿಯಂತ್ರಣ) ನಿಯಮಗಳು, 2007ರಲ್ಲಿ ತಿಳಿಸಿರುವ ಅಧಿಕಾರಿಗಳಿಗೆ / ಉದ್ದೇಶಗಳಿಗೆ ಮಾತ್ರ ರಾಷ್ಟ್ರಲಾಂಛನದ ಬಳಕೆಯು ಸೀಮಿತವಾಗಿರುತ್ತದೆ ಎಂದು ಈ ಮೂಲಕ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ ತಮ್ಮ ಆಡಳಿತಾತ್ಮಕ ವ್ಯಾಪ್ತಿಯಲ್ಲಿ ಬರುವ ಸಂಸ್ಥೆ / ಕಛೇರಿಗಳಿಗೆ ಕೇಂದ್ರ ಸರ್ಕಾರದ ಪತ್ರದಲ್ಲಿ ತಿಳಿಸಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತಾಗಿ ಮತ್ತು ಮೇಲ್ಕಂಡ ಅಧಿನಿಯಮ ಹಾಗೂ ನಿಯಮಗಳ ಉಲ್ಲಂಘನೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಕ್ತ ನಿರ್ದೇಶನ ನೀಡುವಂತೆ ಕೋರಿದೆ.