ಬೆಂಗಳೂರು : ರಾಜ್ಯ ಸರ್ಕಾರದ ಎಲ್ಲಾ ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳಾದ ವಿಧಾನಸಭಾ ಹಾಗೂ ವಿಧಾನಪರಿಷತ್ತಿನ ಸದಸ್ಯರು ಮತ್ತು ಲೋಕಸಭಾ ಹಾಗೂ ರಾಜ್ಯ ಸಭಾ ಸದಸ್ಯರುಗಳ ದೂರವಾಣಿ ಸಂಖ್ಯೆಯನ್ನು ತಮ್ಮ ಬಳಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಸರ್ಕಾರದ ಆದೇಶದಲ್ಲಿ ಏನಿದೆ?
ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಯವರ ದಿನಾಂಕ:16.12.2025ರ ಪತ್ರದಲ್ಲಿ ತಿಳಿಸಿದಂತೆ, ರಾಜ್ಯದ ವಿವಿಧ ಭಾಗಗಳಿಂದ ಸಾರ್ವಜನಿಕರು ಅವರ ಸಮಸ್ಯೆಗಳನ್ನು ಮತ್ತು ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳುವ ಉದ್ದೇಶದಿಂದ ಮಾನ್ಯ ವಿಧಾನಸಭಾ ಹಾಗೂ ವಿಧಾನಪರಿಷತ್ತಿನ ಸದಸ್ಯರುಗಳಿಗೆ ವಿನಂತಿಸಿಕೊಂಡಾಗ ಅನಿವಾರ್ಯವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಬೇಕಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಜನಪ್ರತಿನಿಧಿಗಳ ದೂರವಾಣಿ ಕರೆಗಳನ್ನು ಕೆಲವು ಅಧಿಕಾರಿಗಳು ಸ್ವೀಕರಿಸದೇ ಇರುವುದು ಹಾಗೂ ಒಂದು ವೇಳೆ ಆ ಸಮಯದಲ್ಲಿ ಬೇರೆ ತುರ್ತು ಕಾರ್ಯದಲ್ಲಿ ನಿರತರಾಗಿದ್ದಲ್ಲಿ ತದನಂತರ ಸೌಜನ್ಯಕ್ಕಾದರೂ ಮರು ಕರೆ ಮಾಡದೆ ಇರುವುದು ನನ್ನ ಗಮನಕ್ಕೆ ಬಂದಿದೆ.
ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಇನ್ನು ಮುಂದೆ ಎಲ್ಲಾ ಅಧಿಕಾರಿಗಳು ಜನಪ್ರತಿನಿಧಿಗಳಾದ ಮಾನ್ಯ ವಿಧಾನಸಭಾ ಹಾಗೂ ವಿಧಾನಪರಿಷತ್ತಿನ ಸದಸ್ಯರು ಮತ್ತು ಮಾನ್ಯ ಲೋಕಸಭಾ ಹಾಗೂ ಸಭಾ ರಾಜ್ಯ ಸಭಾ ಸದಸ್ಯರುಗಳ ದೂರವಾಣಿ ಸಂಖ್ಯೆಯನ್ನು ತಮ್ಮ ಬಳಿ ಕಡ್ಡಾಯವಾಗಿ ಇಟ್ಟುಕೊಳ್ಳತಕ್ಕದ್ದು ಹಾಗೂ ಅವರು ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸುವುದು, ಒಂದು ವೇಳೆ ತಾವು ಅನ್ಯ ಕರ್ತವ್ಯದಲ್ಲಿ ನಿರತರಾಗಿದ್ದಲ್ಲಿ ಅವರುಗಳಿಗೆ ತಮ್ಮ ಕರ್ತವ್ಯ ಮುಗಿದ ನಂತರ ಮರು ಕರೆಯನ್ನು ಮಾಡುವುದರ ಮೂಲಕ ಸೂಕ್ತವಾಗಿ ಸಮಸ್ಯೆಗಳ ಕುರಿತು ಸ್ಪಂದಿಸುವಂತೆ ಈ ಮೂಲಕ ಸೂಚನೆಯನ್ನು ನೀಡಿದೆ. ಸದರಿ ಸೂಚನೆಯನ್ನು ತಮ್ಮ ಆಪ್ತ ಶಾಖೆ ಸಿಬ್ಬಂದಿಗಳಿಗೂ ನೀಡಲು ಕೋರಿದೆ.









