ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯು ಜಾಗತಿಕ ಆರ್ಥಿಕತೆಯ ಮೇಲೆ ಕದನ ಕಾರ್ಮೋಡ ಮೂಡಿಸಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಕಚ್ಚಾ ತೈಲ ಮತ್ತು ಚಿನ್ನದ ಬೆಲೆಗಳಲ್ಲಿ ಭಾರಿ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಹಾರ್ಮುಜ್ ಜಲಸಂಧಿಯನ್ನು ಸದ್ಯಕ್ಕೆ ಮುಚ್ಚುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವರು ಹೇಳಿದ್ದರೂ, ತೈಲ ಮಾರುಕಟ್ಟೆಯಲ್ಲಿನ ಆತಂಕ ಮಾತ್ರ ಕಡಿಮೆಯಾಗಿಲ್ಲ.
ಹಾರ್ಮುಜ್ ಜಲಸಂಧಿ ಏಕೆ ಮುಖ್ಯ?
ಹಾರ್ಮುಜ್ ಜಲಸಂಧಿಯು ಕೇವಲ 167 ಕಿಮೀ ಉದ್ದದ ಕಿರಿದಾದ ಸಮುದ್ರ ಮಾರ್ಗವಾಗಿದ್ದರೂ, ವಿಶ್ವದ ಒಟ್ಟು ತೈಲದ ಸುಮಾರು 20% ಭಾಗ ಇಲ್ಲಿಂದಲೇ ಸಾಗುತ್ತದೆ. ಭಾರತವು ತನ್ನ ತೈಲದ ಅಗತ್ಯತೆಯ 90% ಆಮದು ಮಾಡಿಕೊಳ್ಳುತ್ತದೆ, ಅದರಲ್ಲಿ 50% ಈ ಮಾರ್ಗದ ಮೂಲಕವೇ ಬರುತ್ತದೆ. ಒಂದು ವೇಳೆ ಈ ಮಾರ್ಗ ಸಂಪೂರ್ಣ ಬಂದ್ ಆಗಿದ್ದರೆ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 120 ಡಾಲರ್ ದಾಟುವ ಸಾಧ್ಯತೆ ಇತ್ತು. ಆದರೆ ಈಗ ತಜ್ಞರು ಇದು 100 ಡಾಲರ್ ತಲುಪಬಹುದು ಎಂದು ಅಂದಾಜಿಸಿದ್ದಾರೆ.
ಬೆಲೆ ಏರಿಕೆಗೆ 3 ಪ್ರಮುಖ ಕಾರಣಗಳು:
ಟ್ಯಾಂಕರ್‌ಗಳ ಮೇಲೆ ದಾಳಿ: ಜಲಮಾರ್ಗ ಅಧಿಕೃತವಾಗಿ ಬಂದ್ ಆಗದಿದ್ದರೂ, ತೈಲ ಸಾಗಿಸುವ ಹಡಗುಗಳ ಮೇಲೆ ದಾಳಿ ನಡೆಯುವ ಭೀತಿ ಇದೆ. ಇತ್ತೀಚೆಗೆ ಪರ್ಷಿಯನ್ ಗಲ್ಫ್‌ನಲ್ಲಿ ಇಂತಹ ಘಟನೆಗಳು ವರದಿಯಾಗಿವೆ. ಇದರಿಂದ ಪೂರೈಕೆ ವ್ಯತ್ಯಯಗೊಂಡು ಬೆಲೆ ಏರಿಕೆಯಾಗುತ್ತದೆ.
ವಿಮೆ ಮತ್ತು ಶಿಪ್ಪಿಂಗ್ ವೆಚ್ಚ: ಯುದ್ಧದ ಸನ್ನಿವೇಶದಲ್ಲಿ ಹಡಗುಗಳ ವಿಮೆ (War Risk Premium) ಮತ್ತು ಶಿಪ್ಪಿಂಗ್ ಚಾರ್ಜ್‌ಗಳು ದುಪ್ಪಟ್ಟಾಗುತ್ತವೆ. ಈ ಹೆಚ್ಚುವರಿ ವೆಚ್ಚದ ಹೊರೆ ಅಂತಿಮವಾಗಿ ಗ್ರಾಹಕರ ಮೇಲೆ ಬೀಳಲಿದೆ.
ಮಾರುಕಟ್ಟೆಯಲ್ಲಿ ಭೀತಿ: ಜಾಗತಿಕ ಹೂಡಿಕೆದಾರರು ಭವಿಷ್ಯದ ಅನಿಶ್ಚಯತೆಯನ್ನು ಗಮನಿಸಿ ಮೊದಲೇ ತೈಲ ಮತ್ತು ಬಂಗಾರದ ಮೇಲೆ ಹೂಡಿಕೆ ಮಾಡುತ್ತಾರೆ. ಈ ಪ್ಯಾನಿಕ್ ಬೈಯಿಂಗ್‌ನಿಂದಾಗಿ ದರಗಳು ಏರುತ್ತವೆ.
ಸಾಮಾನ್ಯ ಜನರ ಜೇಬಿಗೆ ಎಷ್ಟು ಕತ್ತರಿ?
1. ಪೆಟ್ರೋಲ್-ಡೀಸೆಲ್ ದರ:
ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ತಲುಪಿದರೆ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ ₹4 ರಿಂದ ₹5 ರವರೆಗೆ ಏರಿಕೆಯಾಗಬಹುದು. ಸದ್ಯದ ಪರಿಸ್ಥಿತಿಯಲ್ಲಿ ದೆಹಲಿಯಲ್ಲಿ ಪೆಟ್ರೋಲ್ ₹100 ರ ಗಡಿ ದಾಟುವ ಸಾಧ್ಯತೆ ಇದೆ.
2. ಬಂಗಾರದ ಬೆಲೆ:
ಸುರಕ್ಷಿತ ಹೂಡಿಕೆಯಾಗಿ ಹೂಡಿಕೆದಾರರು ಚಿನ್ನದ ಮೊರೆ ಹೋಗುವುದರಿಂದ, ಬಂಗಾರದ ದರದಲ್ಲಿ ಭಾರಿ ಏರಿಕೆ ಕಂಡುಬರಲಿದೆ. ತಜ್ಞರ ಪ್ರಕಾರ, ಚಿನ್ನದ ಬೆಲೆ ಈಗಿನ ದರಕ್ಕಿಂತ ಬರೋಬ್ಬರಿ ₹30,000 ವರೆಗೂ ಹೆಚ್ಚಾಗುವ ಮುನ್ಸೂಚನೆ ಇದೆ.
3. ಷೇರು ಮಾರುಕಟ್ಟೆ:
ಕಚ್ಚಾ ತೈಲ ದುಬಾರಿಯಾದಂತೆ ರವಾನೆ ವೆಚ್ಚ ಹೆಚ್ಚಾಗಿ ಕಂಪನಿಗಳ ಲಾಭಾಂಶ ಕಡಿಮೆಯಾಗುತ್ತದೆ. ಇದು ಷೇರು ಮಾರುಕಟ್ಟೆಯಲ್ಲಿ ಕುಸಿತಕ್ಕೆ ಕಾರಣವಾಗಬಹುದು.








