ಬೆಂಗಳೂರು: ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಯುದ್ಧದ ಭೀತಿಯ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಸುರಕ್ಷತೆಯ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಂಡಿದೆ. ಇಸ್ರೇಲ್, ಯುಎಇ, ಇರಾನ್ ಹಾಗೂ ಖತಾರ್ ಸೇರಿದಂತೆ ವಿವಿಧ ದೇಶಗಳಲ್ಲಿರುವ ಅನಿವಾಸಿ ಕನ್ನಡಿಗರ ರಕ್ಷಣೆಗಾಗಿ ದೆಹಲಿಯ ನಿವಾಸಿ ಆಯುಕ್ತರೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದಾಗಿ ಇಸ್ರೇಲ್, ಯುಎಇ, ಇರಾನ್, ಖತಾರ್ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಸುರಕ್ಷತೆಯನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ದೆಹಲಿಯ ನಿವಾಸಿ ಆಯುಕ್ತರ ಜೊತೆ ಸಮಾಲೋಚನೆ ನಡೆಸಿ, ಅವರ ಸುರಕ್ಷತೆಗೆ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ.
ಮಧ್ಯಪ್ರಾಚ್ಯ ದೇಶಗಳಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿರುವ ಕಾರಣ ನಾಡಿಗೆ ಮರಳಲು ಸಾಧ್ಯವಾಗದೆ ಯುದ್ಧಪೀಡಿತ ರಾಷ್ಟ್ರಗಳಲ್ಲಿ ಸಿಲುಕಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡುತ್ತೇನೆ. ಸಹಾಯವಾಣಿಯನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯುದ್ಧಪೀಡಿತ ದೇಶಗಳಲ್ಲಿ ನೆಲೆಸಿರುವ ಕುಟುಂಬ ಸದಸ್ಯರು ಸಂಪರ್ಕಕ್ಕೆ ಸಿಗದೆ ಇದ್ದಲ್ಲಿ ಯಾರೂ ಕೂಡ ಆತಂಕಕ್ಕೆ ಒಳಗಾಗುವುದು ಬೇಡ. ಪ್ರತಿಯೊಬ್ಬ ಕನ್ನಡಿಗನ ಸುರಕ್ಷತೆ ನಮ್ಮ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದೇವೆ.
ಬಳ್ಳಾರಿ ಮೂಲದ 32 ಮಂದಿ ದುಬೈನಲ್ಲಿ ಸಿಲುಕಿರುವ ಬಗ್ಗೆ ಮಾಜಿ ಸಚಿವರಾದ ನಾಗೇಂದ್ರ ಅವರು ನನಗೆ ಮಾಹಿತಿ ನೀಡಿದ್ದು, ಅವರ ಸುರಕ್ಷತೆಯ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದಾಗಿ ಇಸ್ರೇಲ್, ಯುಎಇ, ಇರಾನ್, ಖತಾರ್ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಸುರಕ್ಷತೆಯನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ದೆಹಲಿಯ ನಿವಾಸಿ ಆಯುಕ್ತರ ಜೊತೆ ಸಮಾಲೋಚನೆ ನಡೆಸಿ, ಅವರ ಸುರಕ್ಷತೆಗೆ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳುವಂತೆ…
— Siddaramaiah (@siddaramaiah) February 28, 2026








