ಬೆಂಗಳೂರು : ಒಳಮೀಸಲಾತಿ ಸಮೀಕ್ಷೆಯನ್ನು ಎರಡು ತಿಂಗಳ ಕಾಲ ವಿಸ್ತರಿಸಲಾಗಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಶೇ.100ರಷ್ಟು ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಸಿಇಒಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ಆರೋಗ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ, ವಸತಿ ಸೇರಿದಂತೆ ವಿವಿಧ ಇಲಾಖೆಗಳ ಜೊತೆಗೆ ಸಭೆ ನಡೆಸಿದ್ದಾರೆ.
ವಿವಿಧ ಯೋಜನೆಗಳಡಿ ಮನೆಗಳ ನಿರ್ಮಾಣಕ್ಕೆ ನೆರವು ಒದಗಿಸಬೇಕು.
ಅತಿವೃಷ್ಟಿ ಅನಾಹುತ ಎದುರಿಸಲು ಎಲ್ಲಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿವಿಧ ಇಲಾಖೆಗಳನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗಿದ್ದು, ಅವರು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.
ಬೆಂಗಳೂರು ನಗರದಲ್ಲಿ ಮಳೆ ಬಗ್ಗೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಯಾಕೆ ಸಾಧ್ಯವಿಲ್ಲ. ತಗ್ಗು ಪ್ರದೇಶ, ನೀರು ನಿಲ್ಲುವ ಪ್ರದೇಶದ ಮಾಹಿತಿ ಮೊದಲೇ ಇರುತ್ತದೆ. ಅಧಿಕಾರಿಗಳು ಇನ್ನೂ ಹೆಚ್ಚು ಕ್ರಿಯಾ ಶೀಲರಾಗಿ ಕಾರ್ಯನಿರ್ವಹಿಸಬೇಕು. ತಾತ್ಕಾಲಿಕ ಕ್ರಮಗಳೊಂದಿಗೆ ಶಾಶ್ವತ ಪರಿಹಾರಕ್ಕೂ ಕ್ರಮ ಕೈಗೊಳ್ಳಬೇಕು.
ಗ್ರಾಮ ಮಟ್ಟದಲ್ಲಿ ಎಲ್ಲಾ ಸರ್ಕಾರಿ ಜಮೀನು ಗುರುತಿಸಿ, ಒತ್ತುವರಿಯನ್ನು ಗುರುತಿಸುವ ಕಾರ್ಯ ಶೇ.95ರಷ್ಟು ಪೂರ್ಣಗೊಂಡಿದೆ. 14,15,492 ಎಕರೆ ಸರ್ಕಾರಿ ಜಮೀನು ಒತ್ತುವರಿಯನ್ನು ಈಗಾಗಲೇ ಗುರುತಿಸಲಾಗಿದೆ.
ಬಗರ್ಹುಕುಂ ಒಟ್ಟು 14,28,838 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ವಿಲೇವಾರಿ ಬಹಳ ವಿಳಂಬವಾಗುತ್ತಿದ್ದು, ಅರ್ಹ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು.
ಬಡವರ ಇಂದಿರಾ ಕ್ಯಾಂಟೀನ್ ಕಾರ್ಯ ಪೂರ್ಣಗೊಳಿಸಿ : ಸಿಎಂ ತಾಕೀತು
ನಮ್ಮ ಸರ್ಕಾರ ಹೊಸದಾಗಿ ಘೋಷಣೆ ಮಾಡಿರುವ ಎಲ್ಲಾ ಇಂದಿರಾ ಕ್ಯಾಂಟೀನ್ಗಳು ಕಾರ್ಯಾರಂಭ ಮಾಡಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಂದಿರಾ ಕ್ಯಾಂಟೀನ್ಗಳಿಗೆ ಇನ್ನೂ 5ಕಡೆ ಸ್ಥಳ ಗುರುತಿಸಬೇಕಾಗಿದೆ. ತಕ್ಷಣ ನಿವೇಶನ ಗುರುತಿಸಬೇಕು. ಹೊಸದಾಗಿ ಘೋಷಣೆ ಮಾಡಲಾಗಿರುವ 186 ಇಂದಿರಾ ಕ್ಯಾಂಟೀನ್ಗಳ ಪೈಕಿ ಕೇವಲ 103 ನಿರ್ಮಾಣ ಕಾರ್ಯ ಪೂರ್ಣಗೊಂಡಿವೆ. ಆಹಾರ ವಿತರಣೆ 43 ಇಂದಿರಾ ಕ್ಯಾಂಟೀನ್ಗಳಲ್ಲಿ ಮಾತ್ರ ಪ್ರಾರಂಭವಾಗಿದೆ. ಎಲ್ಲಾ ಕಡೆ ಆಹಾರ ವಿತರಣೆ ಪ್ರಾರಂಭಿಸಲು ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದರು.