ಬೆಳಗಾವಿ : ಈ ತಿಂಗಳ 11ರ ಕ್ಯಾಬಿನೆಟ್ ಸಭೆಯಲ್ಲಿ ಒಳಮೀಸಲಾತಿ ಬಿಲ್ಲು ಕುರಿತು ಚರ್ಚೆ ನಡೆಯಲಿದೆ. ಬೆಳಗಾವಿಯ ಅಧಿವೇಶನದಲ್ಲಿ ಒಳಮೀಸಲಾತಿಯ ವಿಧೇಯಕ ಮಂಡನೆಯಾಗಲಿದ್ದು, ಅಲೆಮಾರಿ ಸಮುದಾಯಕ್ಕೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ನ್ಯಾಯಯುತ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಎಲ್ಲಾ ಸಮುದಾಯಗಳಿಗೂ ಸಹಕಾರಿಯಾಗಲಿದೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ಮಾದರ ಮಹಾಸಭಾದ ವತಿಯಿಂದ ರಾಜ್ಯ ಕಾರ್ಯಕಾರಣಿ ಸಮಿತಿಯ ಸಭೆಯನ್ನು ಬೆಳಗಾವಿಯ ‘ಮಯೂರ ಪ್ರೆಸಿಡೆನ್ಸಿ ಕ್ಲಬ್’ನಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ಶ್ರೀ ಶ್ರೀ ಮಾದರ ಬಸವಮೂರ್ತಿ ಚನ್ನಯ್ಯ ಸ್ವಾಮೀಜಿ ಹಾಗೂ ಆಹಾರ ಸಚಿವರು ಮತ್ತು ಮಾದರ ಮಹಾಸಭಾದ ಅಧ್ಯಕ್ಷರಾದ ಕೆ.ಹೆಚ್.ಮುನಿಯಪ್ಪ ಹಾಗೂ ಅಬಕಾರಿ ಸಚಿವರಾದ ಶ್ರೀ ತಿಮ್ಮಾಪುರ ಅವರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಈ ವೇಳೆ ಮಾತನಾಡಿದ ಸಚಿವ ಕೆ.ಹೆಚ್. ಮುನಿಯಪ್ಪ, ನಮ್ಮ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಮಾದರ ಮಹಾಸಭೆ ಅತ್ಯಂತ ಅಗತ್ಯ. ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು ಮಟ್ಟಗಳಲ್ಲಿ ಕ್ರಮಬದ್ಧವಾಗಿ ಸಮಿತಿಗಳನ್ನು ರಚಿಸಲಾಗುತ್ತಿದೆ. ಮಹಾಸಭೆಯ ಸದಸ್ಯತ್ವ ನೊಂದಣಿಯಲ್ಲಿ ಪ್ರತಿ ಕುಟುಂಬದಿಂದ ಕನಿಷ್ಠ ಒಬ್ಬರು ಸದಸ್ಯರಾಗಬೇಕಿದೆ.
ನಾಗಮೋಹನ್ ದಾಸ್ ವರದಿ ಸಮುದಾಯದ ಸಮಸ್ಯೆಗಳು ಮತ್ತು ಪರಿಹಾರ ಮಾರ್ಗಗಳನ್ನು ಸ್ಪಷ್ಟಪಡಿಸಿದೆ. ಆದ್ದರಿಂದ ಪ್ರತಿಯೊಂದು ಮನೆಯಲ್ಲಿಯೂ ಒಬ್ಬ ಸದಸ್ಯರು ಮಾದರ ಮಹಾಸಭೆಯಲ್ಲಿ ನೊಂದಣಿ ಮಾಡುವುದು ಅತ್ಯಗತ್ಯ.
ನಮ್ಮ ಸಮುದಾಯದ ಒಟ್ಟು ಜನಸಂಖ್ಯೆ ಸುಮಾರು 45 ಲಕ್ಷಕ್ಕಿಂತ ಹೆಚ್ಚು ಇದ್ದರೂ, ಪರಿಶಿಷ್ಟ ಜಾತಿ ಸಮೀಕ್ಷೆಯ ಸಂದರ್ಭದಲ್ಲಿ ಬಹುಸಂಖ್ಯೆಯವರು ನೊಂದಣಿಯಿಂದ ಹೊರಗುಳಿದ ಕಾರಣ, ಮೀಸಲಾತಿಯಲ್ಲಿ 6–6–5 ಹಂಚಿಕೆ ನಮಗೆ ಬಂದಂತಾಯಿತು.
ಬೆಂಗಳೂರು ನಗರದಲ್ಲಿಯೇ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ನೊಂದಣಿ ಮಾಡಿಸದೆ ಹೊರಗುಳಿದಿದ್ದಾರೆ. ಮುಂದಿನ 2026ರ ಕೇಂದ್ರ ಸಮೀಕ್ಷೆಯಲ್ಲಿ ಯಾವತ್ತೂ ನೊಂದಣಿ ತಪ್ಪಿಸಿಕೊಳ್ಳಬಾರದು. ನೊಂದಣಿ ಮಾಡಿಸಿದಾಗ ಮಾತ್ರ ನಮ್ಮ ಜನಸಂಖ್ಯೆಯ ನಿಜವಾದ ಬಲ ಸರ್ಕಾರಕ್ಕೆ ಗೋಚರಿಸುತ್ತದೆ.
ಈ ಸಂಘಟನೆಯಲ್ಲಿ ಸೇರುವ ಮೂಲಕ ಸಂಗ್ರಹವಾಗುವ ಸದಸ್ಯತ್ವ ನಿಧಿಯನ್ನು ಸಂಪೂರ್ಣ ಠೇವಣಿ ರೂಪದಲ್ಲೇ ಉಳಿಸಿ, ಅದರ ಬಡ್ಡಿ ಆದಾಯವನ್ನು ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಬಳಸಲಾಗುತ್ತದೆ. ಇದರಿಂದ ಐಎಎಸ್, ಕೆಎಎಸ್, ವೈದ್ಯರು, ಎಂಜಿನಿಯರ್‌ಗಳು ಆಗಬೇಕೆಂದು ಬಯಸುವ ನಮ್ಮ ಮಕ್ಕಳಿಗೆ ಬಲ ಸಿಗುತ್ತದೆ. ಮುಂದಿನ ಒಂದು ತಿಂಗಳೊಳಗೆ ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಸಮಿತಿಗಳ ರಚನೆ ಪೂರ್ಣಗೊಳ್ಳಲಿದೆ ಎಂದರು.
ಗಾಂಧಿ ಭವನದ ಎದುರು ಕೇಂದ್ರ ಕಚೇರಿ ಸ್ಥಾಪನೆಗೊಂಡಿದ್ದು, ಇದರಿಗಾಗಿ 2 ಕೋಟಿ ರೂಪಾಯಿ ಠೇವಣಿ ಇಡಲಾಗಿದೆ. ಸಮುದಾಯಕ್ಕೆ ಏನೇ ಸಮಸ್ಯೆಗಳು ಬಂದರೂ ಪರಿಹಾರಕ್ಕಾಗಿ ನಾವೆಲ್ಲರೂ ಒಂದಾಗಿ ನಿಲ್ಲಬೇಕೆಂಬ ಉದ್ದೇಶದಿಂದ ಈ ಕಚೇರಿಯನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.
ಈಗ ಆಯ್ಕೆಯಾಗಿರುವ ಜಿಲ್ಲಾ ಅಧ್ಯಕ್ಷರು, ಕಾರ್ಯಕಾರಣಿ ಸದಸ್ಯರು ಅಡಾಕ್ ಸಮಿತಿಯವರು ಮಾತ್ರ. ಮುಂದಿನ 6–8 ತಿಂಗಳಲ್ಲಿ ಪ್ರಜಾಪ್ರಭುತ್ವದ ಮೂಲಕ ಅಧಿಕೃತ ಚುನಾವಣೆ ನಡೆಯಲಿದೆ. ನೊಂದಣಿ ಮಾಡಿಕೊಂಡಿರುವ ಸದಸ್ಯರು ಮತ ಚಲಾಯಿಸಿ – ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ನಾಯಕರನ್ನು ಆಯ್ಕೆಮಾಡಲಿದ್ದಾರೆ.
ತಾಲ್ಲೂಕು–ಜಿಲ್ಲಾ ಮಟ್ಟದಲ್ಲಿ ಸಂಘಟನೆಯ ಬಲವರ್ಧನೆಗಾಗಿ ಯುವಕರನ್ನು ಒಗ್ಗೂಡಿಸಿ ಕೆಲಸ ಮಾಡುತ್ತಿರುವ ದುರ್ಯೋಧನ ಹೈಹೊಳೆ ರವರಂತಹ ನಾಯಕರು ಹೆಚ್ಚು ಹೆಚ್ಚು ನೊಂದಣಿ ಮಾಡಿಸಬೇಕು. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು—ಎಲ್ಲೆಡೆ ಸಮಿತಿಗಳ ರಚನೆ ಜಾರಿಯಲ್ಲಿದೆ.
ಹಿರಿಯ ನಾಯಕರು ರಮೇಶ್, ತಿಮ್ಮಯ್ಯ, ಕೋಟೆ ಶಿವಣ್ಣ ಹಾಗೂ ಇತರರು ಸಂಘಟನೆಯನ್ನು ಬಲಪಡಿಸುತ್ತಿದ್ದಾರೆ.ನಮ್ಮ ಸಮುದಾಯದ ಶೈಕ್ಷಣಿಕ–ಸಾಮಾಜಿಕ ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಅನಿವಾರ್ಯ. ಒಟ್ಟಾಗಿ ನಿಂತಾಗ ಮಾತ್ರ ನಮ್ಮ ಬಲ ಜಗತ್ತಿಗೆ ಗೋಚರಿಸುತ್ತದೆ.
ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಮಾದರ ಚನ್ನಯ್ಯ ಸ್ವಾಮೀಜಿ, ಅಬಕಾರಿ ಸಚಿವ ತಿಮ್ಮಾಪುರ, ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ಸಂಸದ ಚಂದ್ರಪ್ಪ, ಶಾಸಕರಾದ ಡಿ. ತಿಮ್ಮಯ್ಯ, ನೆಲಮಂಗಲ ಶಾಸಕರಾದ ಶ್ರೀನಿವಾಸ, ಮಾಜಿ ಶಾಸಕರಾದ ತಿಮ್ಮರಾಯಪ್ಪ, ಆಧಿಜಾಂಬವ ನಿಗಮದ ಅಧ್ಯಕ್ಷ ಮಂಜುನಾಥ್, ಮಾಜಿ ಶಾಸಕರಾದ ಧರ್ಮಸೇನ್,ಗಂಗನುಮಯ್ಯ, ಸಿ. ರಮೇಶ್, ಎ.ಮುನಿಯಪ್ಪ ಹಾಗೂ ಕಾರ್ಯಕಾರಣಿ ಸದಸ್ಯರು–ಮುಖ್ಯ ಮುಖಂಡರು ಉಪಸ್ಥಿತರಿದ್ದರು.







