ಕೊಪ್ಪಳ ಮೇ 15 (ಕರ್ನಾಟಕ ವಾರ್ತೆ): ರೈಲ್ವೆ ಯೋಜನೆಗಳನ್ನು ಪ್ರತಿ ಹಳ್ಳಿಗೂ ತಲುಪಿಸುವ ಚಿಂತನೆ ನಮ್ಮ ಸರ್ಕಾರದ್ದಾಗಿದೆ. ಅದಕ್ಕಾಗಿ ಪ್ರಧಾನ ಮಂತ್ರಿಗಳು ದೇಶದಲ್ಲಿ 7 ಲಕ್ಷ ಕೋಟಿ ರೂ ಹಳೆಯ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಭಾರತ ಸರ್ಕಾರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಹೇಳಿದರು.
ಅವರು ಗುರುವಾರ ಕುಷ್ಟಗಿ ರೈಲು ನಿಲ್ದಾಣದಲ್ಲಿ ನೈಋತ್ಯ ರೈಲ್ವೆ ವಿಭಾಗದ ಗದಗ (ತಳಕಲ್ಲ) ಕುಷ್ಟಗಿ ಹೊಸ ರೈಲು ಮಾರ್ಗದ ಉದ್ಘಾಟನೆ ಹಾಗೂ ರೈಲು ಸಂಖ್ಯೆ. 17323 ಕುಷ್ಟಗಿ-ಎಸ್.ಎಸ್.ಎಸ್. ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಹಸಿರು ನಿಶಾನೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು. ರೈಲ್ವೆ ಸಾರಿಗೆಯಿಂದ ಜನರಿಗೆ ಅನುಕೂಲವಾಗಲಿದೆ. ರೈಲು ಒಂದು ಇಂಥ ಇಲಾಖೆ ಇದೆ ಇದರಲ್ಲಿ ಎಲ್ಲರೂ ಓಡಾಡುತ್ತಾರೆ. ದೇವೆಗೌಡರು ಪ್ರಧಾನಿಗಳಾಗಿದ್ದ ಸಮಯದಲ್ಲಿ ಬಸವರಾಜ ರಾಯರೆಡ್ಡಿ ಅವರು ಈ ಭಾಗದ ಸಂಸದರಾಗಿದ್ದ ಸಮಯದಲ್ಲಿ ಗದಗ-ವಾಡಿ ರೈಲು ಮಾರ್ಗದ ಯೋಜನೆ ಕೈಗೆತ್ತಿಕೊಂಡಿದ್ದರು. ಬಹು ದಿನಗಳ ನಂತರ ಈ ಭಾಗದ ಜನರ ಕನಸು ಈಗ ನನಸಾಗಿದೆ ಎಂದರು.
ವಾಜಪೇಯಿ ಅವರು ಪ್ರಧಾನಿಗಳಾಗಿದ್ದ ಸಮಯದಲ್ಲಿ ಅವರು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಒತ್ತು ನೀಡಿದರೆ ನರೇಂದ್ರ ಮೋದಿಜಿ ಅವರು ರೈಲ್ವೆ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ 45 ಸಾವಿರ ಕೋಟಿ ರೂ ರೈಲ್ವೆ ಯೋಜನೆಯನ್ನು ಕರ್ನಾಟಕದಲ್ಲಿ ಮಾಡುತ್ತಿದ್ದೆವೆ. 2014 ರಿಂದ 2024 ರವರೆಗೆ 5 ಲಕ್ಷ ಉದ್ಯೋಗ ರೈಲ್ವೆ ಇಲಾಖೆಯಲ್ಲಿ ಜನರಿಗೆ ನೀಡಲಾಗಿದೆ. ರೈಲ್ವೆ ಇಲಾಖೆಯಲ್ಲಿ ಕರ್ನಾಟಕದವರಿಗೆ ಉದ್ಯೋಗ ಸಿಗಲು ಅನುಕೂಲವಾಗಲು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. ಒಂದೇ ಭಾರತ 50 ಎಸಿ ಸ್ಲೀಪರ್ ಕೋಚ್ ಟ್ರೈನಗಳನ್ನು ಇನ್ನೂ ಒಂದುವರೆ ತಿಂಗಳಲ್ಲಿ ದೇಶದಲ್ಲಿ ಬಿಡುಗಡೆ ಮಾಡಲಿದ್ದೆವೆ ಎಂದು ಹೇಳಿದರು.
2025-26ನೇ ಸಾಲಿನಲ್ಲಿ ಗದಗ-ವಾಡಿ ರೈಲು ಯೋಜನೆಗೆ 549.45 ಕೋಟಿ ರೂ ಹಣವನ್ನು ಇರಿಸಿದ್ದೆವೆ. ಗದಗ-ವಾಡಿ ಮಧ್ಯ ಒಟ್ಟು 27 ರೈಲು ನಿಲ್ದಾಣಗಳು ಬರುತ್ತವೆ. ಎಲ್ಲಾ ರೈಲು ನಿಲ್ದಾಣಗಳ ಅಭಿವೃದ್ಧಿಗೆ ನಮ್ಮ ಸರ್ಕಾರದ ಆದ್ಯತೆ ನೀಡಿದೆ. ಇಂದು ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ್ದು, ಪ್ರತಿದಿನ ಕುಷ್ಟಗಿ-ಹುಬ್ಬಳ್ಳಿ ಮಧ್ಯ ಈ ರೈಲು ಸಂಚರಿಸಲಿದೆ. ಟಿಕೆಟ್ ದರ 70 ರೂ ಇದ್ದು. ಬೆಳಿಗ್ಗೆ 7 ಗಂಟೆಗೆ ಕುಷ್ಟಗಿಯಿಂದ ಹೊರಟ ರೈಲು 10.40ಕ್ಕೆ ಹುಬ್ಬಳ್ಳಿ ತಲುಪಲಿದೆ ಮತ್ತೆ ಸಂಜೆ 5 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 8.30 ಕುಷ್ಟಗಿ ಬಂದು ತಲುಪಲಿದೆ ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ಮಾತನಾಡಿ ಗದಗ-ವಾಡಿ ರೈಲು ಮಾರ್ಗದ ಬಹುದಿನಗಳ ಕನಸು ಈಗ ಇಡೇರಿದೆ. ಬಸವರಾಜ ರಾಯರೆಡ್ಡಿ ಅವರು ಸಂಸದರಾಗಿದ್ದ ಸಮಯದಲ್ಲಿ ಇದನ್ನು ಪ್ರಾರಂಭಿಸಿದರು. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೇ. 50:50 ಪ್ರತಿ ಶತದಲ್ಲಿ ಅನುದಾನವನ್ನು ನೀಡುತ್ತವೆ. ಈ ಯೋಜನೆಗೆ ನಮ್ಮ ಸರ್ಕಾರ ಭೂಮಿ ಒದಗಿಸುವ ಕೆಲಸವನ್ನು ಮಾಡಿದೆ. ಈ ಭಾಗದಿಂದ ಬೆಂಗಳೂರಿಗೆ ಹೋಗುವ ಟ್ರೇನ್ ವ್ಯವಸ್ಥೆ ಆಗಬೇಕು. ದರೋಜಿ-ಬಾಗಲಕೋಟ ಸರ್ವೆ ಆಗಬೇಕು ಇದರಿಂದ ವಾಣಿಜ್ಯೋದ್ಯಮಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ ಅವರು ಮಾತನಾಡಿ, ಗದಗ-ವಾಡಿ ರೈಲ್ವೆ ಮಾರ್ಗ ಸ್ಥಾಪನೆಯು ಬಹು ವರ್ಷಗಳ ಬೇಡಿಕೆಯಾಗಿತ್ತು. ಈ ಮಾರ್ಗದಲ್ಲಿ ಬರುವ ಕುಷ್ಟಗಿ ಪಟ್ಟಣಕ್ಕೆ ಇಂದಿನಿAದ ರೈಲು ಸಂಚಾರ ಆರಂಭವಾಗಿದ್ದು, ಈ ಭಾಗದ ಅನೇಕ ಹಿರಿಯರು ಕಂಡ ಕನಸು ಇಂದು ನನಸಾಗಿದೆ. ಗದಗ-ವಾಡಿ ರೈಲು ಲೈನ್ ನಿಂದ ನಮ್ಮ ಭಾಗದ ಅಭಿವೃದ್ಧಿಗೆ ತುಂಬಾ ಅನುಕೂಲವಾಗಲಿದೆ. ಸದ್ಯ ಕುಷ್ಟಗಿಯಿಂದ ಹುಬ್ಬಳ್ಳಿವರೆಗೆ ರೈಲು ಸಂಚಾರ ಆರಂಭವಾಗಿದ್ದು, ಮುಂದಿನ ದಿನಮಾನಗಳಲ್ಲಿ ಈ ಮಾರ್ಗದಿಂದ ಲಿಂಕ್ ಲೈನ್ ಮಾಡಿ ಬೆಂಗಳೂರಿಗೂ ಪ್ರಯಾಣಿಸಲು ಅನುಕೂಲ ಮಾಡಿಕೊಡಬೇಕೆಂದು ರೈಲ್ವೆ ಸಚಿವರಲ್ಲಿ ಮನವಿ ಮಾಡಿದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯರಡ್ಡಿ ಅವರು ಮಾತನಾಡಿ, ರೈಲ್ವೆ ಮಾರ್ಗಗಳನ್ನು ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕಾಗಿ ಬಹಳ ಪರಿಶ್ರಮಬೇಕು. 1996ರಲ್ಲಿ ನಾನು ಸಂಸದಾನ ಸಂದರ್ಭದಲ್ಲಿ ಮೊದಲನೆ ಬಾರಿಗೆ ಕೊಪ್ಪಳ ದಿಂದ ರಾಯಚೂರು ಮಾರ್ಗವಾಗಿ ಹೈದ್ರಾಬಾದಿಗೆ ರೈಲ್ವೆ ಮಾರ್ಗ ಆಗಬೇಕೆಂದು ಮುನಿರಾಬಾದ್-ಮಹೆಬೂಬ್ ನಗರ ರೈಲ್ವೆ ಮಾರ್ಗವನ್ನು ವಾಯಾ ಗಂಗಾವತಿ, ಸಿಂದನೂರ, ರಾಯಚೂರು ಮೂಲಕ ರೈಲ್ವೆ ಲೈನ್ ಮಾಡಿಸಲು ಪ್ರಯತ್ನಿಸಿದ್ದೆ. ತದನಂತರ 1997ರಲ್ಲಿ ಅಂದಿನ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೆಗೌಡ ಅವರನ್ನು ಕರೆಸಿ ಈ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸರ್ವೇ ಮಾಡಿಸಲಾಯಿತು. ಅದೇ ಸಂದರ್ಭದಲ್ಲಿ ಗದಗ-ವಾಡಿ ರೈಲ್ವೆ ಮಾರ್ಗ ಆಗಬೇಕೆಂದು ಒತ್ತಾಯಿಸಲಾಯಿತು. ನಂತರದಲ್ಲಿ ಸರ್ವೇಯನ್ನು ಮಾಡಿಸಲಾಗಿತ್ತು. ಆಗ ಕೆಲವು ತಿಂಗಳುಗಳಲ್ಲಿ ಸಂಸತ್ ವಿಸರ್ಜನೆಗೊಂಡ ಕಾರಣ ಗದಗ-ವಾಡಿ ರೈಲ್ವೆ ಮಾರ್ಗ ವಿಳಂಭವಾಯಿತು ಎಂದರು.
2009 ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ಗದಗ-ವಾಡಿ ರೈಲ್ವೆ ಮಾರ್ಗವನ್ನು ಅಪ್‌ಡೇಟ್ ಮಾಡಲು ಒತ್ತಾಯಿಸಲಾಯಿತು. ನಂತರ 2013-14ರಲ್ಲಿ ಗದಗ-ವಾಡಿ ರೈಲ್ವೆ ಮಾರ್ಗಕ್ಕೆ ಅನುಮೋದನೆ ದೊರೆಯಿತು. ಅಂದೂ ಸಹ ಮುಖ್ಯಮಂತ್ರಿಗಳು ಆಗಿದ್ದ ಸಿದ್ದರಾಮ್ಯನವರು ಈ ಕಾಮಗಾರಿಗೆ ಶೇ. 50ರಷ್ಟು ಹಣವನ್ನು ಮತ್ತು ಭೂಸ್ವಾಧೀನಕ್ಕೆ ಒಪ್ಪಿಗೆ ನೀಡಿದ್ದರು. ಈ ಮಾರ್ಗಕ್ಕೆ ಒಟ್ಟು 257 ಕಿ.ಮೀ.ಗೆ 4195 ಎಕರೆ ಜಮೀನು ಬೇಕಿದ್ದು, ಈಗಾಗಲೇ 3867 ಎಕರೆ ಅಂದರೆ, ಶೇ.99ರಷ್ಟು ಭೂಸ್ವಾಧೀನ ಆಗಿದೆ. ನಮ್ಮ ರಾಜ್ಯದಲ್ಲಿ ಇಷ್ಟೊಂದು ತ್ವರಿತವಾಗಿ ಭೂಸ್ವಾಧೀನ ಆಗಿದ್ದು, ಗದಗ-ವಾಡಿ ಯೋಜನೆಯ ಮಾರ್ಗಕ್ಕೆ ಮಾತ್ರ ಆಗಿದೆ. ತಳಕಲ್ ನಿಂದ ಕುಷ್ಟಗಿ ವರೆಗೆ ಸುಮಾರು 56 ಕಿ.ಮೀ ವರೆಗೆ ಕಾಮಗಾರಿಯು ಪೂರ್ಣಗೊಂಡಿದೆ. ವಾಡಿಯಿಂದ ಶಹಪುರ ವರೆಗೆ 48 ರೈಲ್ವೆ ಲೈನ್ ಮುಕ್ತಾಯದ ಹಂತದಲ್ಲಿದೆ. 165 ಕಿ.ಮೀ ಕುಷ್ಟಗಿಯಿಂದ ಸುರಪೂರ ವರೆಗೆ ಕಾಮಗಾರಿಕೆ ಟೆಂಡರ್ ಮಾಡಲಾಗುತ್ತಿದ್ದು, ಇದನ್ನು ಒನ್ ಸಾಟ್ ಟೆಂಡರ್ ಮಾಡಿದರೇ ರಾಜ್ಯ ಸರ್ಕಾರದಿಂದ ಶೇ.50ರಷ್ಟು ಅನುದಾನವನ್ನು ಬಿಡುಗಡೆ ಮಾಡಿಸಲಾಗುವುದು. ಈ ಹಿನ್ನೆಲೆಯಲ್ಲಿ ಒನ್ ಸಾಟ್ ಟೆಂಡರ್ ಮಾಡಿಸಲು ಮನವಿ ಮಾಡಿಕೊಳ್ಳುತ್ತೇನೆ. ಇದರ ಜೊತೆಗೆ ಈ ಮಾರ್ಗದ ವಿದ್ಯುದ್ದೀಕರಣ ಆಗಬೇಕು. ಗದಗ-ವಾಡಿ ಕಾಮಗಾರಿ ಪೂರ್ಣಗೊಂಡರೆ, ಈ ಭಾಗದ ಜನರ ಪ್ರಯಾಣದ ಜೊತೆಗೆ ವಾಣಿಜ್ಯ ವ್ಯವಹಾರಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಕುಷ್ಟಗಿ ಪುರಸಭೆ ಅಧ್ಯಕ್ಷರಾದ ಮಹಾಂತೇಶ , ಜಿಲ್ಲಾಧಿಕಾರಿ ನಲಿನ್ ಅತುಲ್, ನೈರುತ್ಯ ರೈಲ್ವೆ ಹುಬ್ಬಳ್ಳಿಯ ವಿಭಾಗೀಯ ವ್ಯವಸ್ಥಾಪಕರಾದ ಬೇಲಾ ಮೀನಾ, ಕಾಮಗಾರಿ ನಿರ್ಮಾಣ ವಿಭಾಗದ ಸಿಎಓ ಅಜಯ್ ಶರ್ಮಾ, ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಹಾಗೂ ಹಾಲಪ್ಪ ಆಚಾರ್, ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ಕೆ.ಶರಣ್ಣಪ್ಪ ಹಾಗೂ ಬವರಾಜ ದಢೇಸೂಗೂರು, ಮುಖಂಡರಾದ ಡಾ. ಕೆ.ಬಸವರಾಜ ಹಾಗೂ ಇತರೆ ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಹಸಿರು ನಿಶಾನೆ: ಕಾರ್ಯಕ್ರಮದ ನಂತರ ರೈಲು ಸಂಖ್ಯೆ. 17323 ಕುಷ್ಟಗಿ-ಎಸ್.ಎಸ್.ಎಸ್. ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಕೇಂದ್ರ ಸರ್ಕಾರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಅಧಿಕಾರಿಗಳು ಹಾಗೂ ಇತರೆ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.