ಬೆಂಗಳೂರು: ರಾಜ್ಯದ ಸಾರಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 20 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರಿಂದಾಗಿ ಮೇ ಮೂರನೇ ವಾರದಿಂದ ರಾಜ್ಯದ ರಸ್ತೆಗಳಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಅನುಮಾನವಾಗಿದ್ದು, ಸಾರ್ವಜನಿಕರು ಹಾಗೂ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ವೇತನ ಹೆಚ್ಚಳ ಮತ್ತು ಬಾಕಿ ಇರುವ ವೇತನದ ಹಿಂಬಾಕಿ ಪಾವತಿ ಕುರಿತು ಸರ್ಕಾರ ಹಾಗೂ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ನಡುವೆ ನಡೆದ ಸುಮಾರು 12 ಸುತ್ತಿನ ಮಾತುಕತೆಗಳು ಫಲಪ್ರದವಾಗಿಲ್ಲ. ನೌಕರರ ಬೇಡಿಕೆಗಳಿಗೆ ಸರ್ಕಾರ ನೀಡಿದ ಪ್ರಸ್ತಾವನೆಯನ್ನು ಸಮಿತಿಯು ತಿರಸ್ಕರಿಸಿದ್ದು, ಹೋರಾಟದ ಹಾದಿ ಹಿಡಿಯಲು ನಿರ್ಧರಿಸಿದೆ.
ನೌಕರರ ಪ್ರಮುಖ ಬೇಡಿಕೆಗಳು ಇಲ್ಲಿವೆ:
ಸಾರಿಗೆ ನೌಕರರ ಸಂಘಟನೆಗಳು ಸರ್ಕಾರದ ಮುಂದೆ ಪ್ರಮುಖವಾಗಿ ಐದು ಬೇಡಿಕೆಗಳನ್ನು ಇಟ್ಟಿವೆ:
38 ತಿಂಗಳ ಹಿಂಬಾಕಿ: ಬಾಕಿ ಇರುವ ಸಂಪೂರ್ಣ 38 ತಿಂಗಳ ವೇತನದ ಹಿಂಬಾಕಿಯನ್ನು ಕೂಡಲೇ ಪಾವತಿಸಬೇಕು.
ವೇತನ ಹೆಚ್ಚಳ: 2024ರ ಜನವರಿ 1 ರಿಂದ ಜಾರಿಗೆ ಬರುವಂತೆ ಮೂಲ ವೇತನದಲ್ಲಿ ಶೇ 25ರಷ್ಟು ಹೆಚ್ಚಳ ಮಾಡಬೇಕು.
ಡಿಎ ವಿಲೀನ: ಶೇ 31ರಷ್ಟು ತುಟ್ಟಿಭತ್ಯೆಯನ್ನು (DA) ಮೂಲ ವೇತನದಲ್ಲಿ ಸೇರಿಸಬೇಕು.
ಏಕಗಂತು ಪಾವತಿ: ಒಪ್ಪಿಕೊಂಡಿರುವ ₹1,272 ಕೋಟಿ ಬಾಕಿ ಮೊತ್ತವನ್ನು ಕಂತುಗಳಲ್ಲಿ ನೀಡುವ ಬದಲು ಒಂದೇ ಬಾರಿಗೆ ಬಿಡುಗಡೆ ಮಾಡಬೇಕು.
ಭತ್ಯೆಗಳ ಹೆಚ್ಚಳ: ಬಾಟಾ ಮತ್ತು ಕೋವಿಡ್ ಸಮಯದ ಬಾಕಿ ಹಣವನ್ನು ತಕ್ಷಣವೇ ನೀಡಬೇಕು.
ಸರ್ಕಾರ vs ನೌಕರರು: ವ್ಯತ್ಯಾಸವೆಲ್ಲಿದೆ?
ಸಭೆಗಳಲ್ಲಿ ಸರ್ಕಾರವು ಶೇ 7 ರಷ್ಟು ವೇತನ ಹೆಚ್ಚಳ ಮತ್ತು 38 ತಿಂಗಳ ಬದಲಿಗೆ 26 ತಿಂಗಳ ಬಾಕಿ ನೀಡಲು ಮುಂದಾಗಿದೆ. ಆದರೆ, ಇದು ತಮಗೆ ಮಾಡುತ್ತಿರುವ ಅನ್ಯಾಯ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರುವವರೆಗೂ ಬಸ್ ಚಕ್ರಗಳು ಉರುಳುವುದಿಲ್ಲ” ಎಂದು ನೌಕರರ ಸಂಘಟನೆಗಳು ಎಚ್ಚರಿಕೆ ನೀಡಿವೆ.








