ಕೋಲ್ಕತ್ತಾ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ ಮುಂದುವರೆದಿದ್ದು, ಇದೀಗ ಆಧ್ಯಾತ್ಮಿಕ ನಾಯಕ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಸಮರ್ಥಿಸಿಕೊಂಡ ವಕೀಲ ರಮಣ್ ರಾಯ್ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ ಎಂದು ಪಶ್ಚಿಮ ಬಂಗಾಳ ಮೂಲದ ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ವಕ್ತಾರ ರಾಧಾರಾಮನ್ ದಾಸ್ ತಿಳಿಸಿದ್ದಾರೆ.
ದಾಸ್ ಪ್ರಕಾರ, ನೆರೆಯ ದೇಶದ ಮೂಲಭೂತವಾದಿಗಳು ರಾಯ್ ಅವರ ಮನೆಗೆ ನುಗ್ಗಿ ಅವರ ಮೇಲೆ ದಾಳಿ ಮಾಡಿದರು. ನ್ಯಾಯಾಲಯದಲ್ಲಿ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಸಮರ್ಥಿಸಿಕೊಂಡಿದ್ದೇ ರಾಯ್ ಅವರ ಏಕೈಕ “ತಪ್ಪು” ಎಂದು ಅವರು ಹೇಳಿದರು.
ದಾಳಿಯಲ್ಲಿ ರಾಯ್ ಗಂಭೀರವಾಗಿ ಗಾಯಗೊಂಡಿದ್ದು, ಪ್ರಸ್ತುತ ಐಸಿಯುನಲ್ಲಿದ್ದಾರೆ ಎಂದು ಇಸ್ಕಾನ್ ಕೋಲ್ಕತ್ತಾದ ವಕ್ತಾರರು ಹೇಳಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ ಅವರು, ರಾಯ್ ಐಸಿಯುನಲ್ಲಿ ದಾಖಲಾಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು “ದಯವಿಟ್ಟು ವಕೀಲ ರಮಣ್ ರಾಯ್‌ಗಾಗಿ ಪ್ರಾರ್ಥಿಸಿ. ನ್ಯಾಯಾಲಯದಲ್ಲಿ ಚಿನ್ಮೊಯ್ ಕೃಷ್ಣ ಪ್ರಭು ಪರ ವಾದ ಮಂಡಿಸಿದ್ದು ಮಾತ್ರ ಅವರ ‘ಅಪರಾಧ’ವಾಗಿತ್ತು. ಅಲ್ಲಿದ್ದ ಮೂಲಭೂತವಾದಿಗಳು ಅವರ ಮನೆಯನ್ನು ಧ್ವಂಸಗೊಳಿಸಿ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಅವರನ್ನು ಐಸಿಯುನಲ್ಲಿ ದಾಖಲಿಸಲಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.