ಬೆಂಗಳೂರು : 2024-25 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಬಾಲಾಸ್ಯ ಕಾರ್ಯಕ್ರಮದಡಿ 17 ನೇ ಸುತ್ತಿನ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ 1-19ನೇ ವಯೋಮಾನದ ಎಲ್ಲಾ ಮಕ್ಕಳಿಗೆ ಮಾತ್ರ ವಿತರಿಸಿ ಹಮ್ಮಿಕೊಳ್ಳುವ ಬಗ್ಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
2024-25 ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಮತ್ತು ಪದವಿ ಪೂರ್ವ ಶಿಕ್ಷಣ ಕಾಲೇಜುಗಳಲ್ಲಿ 1-19 ರ ವಯೋಮಾನದ ಎಲ್ಲಾ ಮಕ್ಕಳಿಗೆ ರಾಷ್ಟ್ರೀಯ ಜಂತುಹುಳು ನಿವಾರಣೆಯ ದಿನಾಚರಣೆಯನ್ನು (National De-worming Day – NDD) ಪ್ರಸ್ತುತ ಶೈಕ್ಷಣಿಕ ವರ್ಷದ ಕಾರ್ಯಕ್ರಮವಾಗಿ ಡಿಸೆಂಬರ್-2024ರ ಮಾಹೆಯಲ್ಲಿ ದಿನಾಂಕ : 09.12.2024 ರಂದು ಮತ್ತು ಸದರಿ ದಿನದಂದು ಹಾಜರಾಗದೇ ಇರುವ ಮಕ್ಕಳಿಗೆ ದಿನಾಂಕ :16.12.2024 ರಂದು ಮಾಪ್ ಅಪ್ ದಿನವನ್ನಾಗಿ ( Mop up Day ) ಆಯೋಜಿಸಲು ಉಲ್ಲೇಖಿತ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಸಂಬಂಧ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಜಂತುಹುಳು ನಿವಾರಣಾ ದಿನವನ್ನು ಹಮ್ಮಿಕೊಂಡು ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈ ಕೆಳಕಂಡ ಕ್ರಮಗಳನ್ನು ನಿರ್ವಹಿಸಲು ಸೂಚಿಸಿದೆ.
ಪೂರ್ವ ಸಿದ್ಧತಾ ಕ್ರಮಗಳು:-
1. ರಾಷ್ಟ್ರೀಯ ಜಂತುಹುಳು ನಿವಾರಣೆಯ ದಿನಾಚರಣೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರತಿ ಶಾಲೆಯಲ್ಲಿಯೂ SDMC / ಶಾಲಾ ಆಡಳಿತ ಮಂಡಳಿ ಸಭೆಯನ್ನು ಕರೆದು ಮಕ್ಕಳನ್ನು ಆಚರಣೆಯ ದಿನದಂದು ತಪ್ಪದೇ ಶಾಲೆಗೆ ಹಾಜರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಕ್ಕಳ ಪೋಷಕರಿಗೆ ಮಾಹಿತಿ ನೀಡಿ ಕಾರ್ಯಕ್ರಮದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡುವುದು.
2. ಶಾಲೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಯು ತಲುಪಿಸುವ ಮಾತ್ರೆಗಳನ್ನು ತರಗತಿವಾರು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸ್ವೀಕರಿಸಿ ಲೆಕ್ಕ ವಿವರದೊಂದಿಗೆ ಸುರಕ್ಷಿತವಾಗಿ ನಿರ್ವಹಿಸಬೇಕು.
3. ದಿನಾಂಕ: 09.12.2024 ರಂದು ವಿದ್ಯಾರ್ಥಿಯು ಗೈರು ಹಾಜರಾದಲ್ಲಿ ದಿನಾಂಕ: 16.12.2024 ರಂದು ಮಾಪ್ ಅಪ್ ದಿನವನ್ನಾಗಿ ಕಡ್ಡಾಯವಾಗಿ ಏರ್ಪಡಿಸಿ ಹಿಂದೆ ಗೈರುಹಾಜರಾದ ಮಕ್ಕಳಿಗೆ ಮಾತ್ರೆಯ ವಿತರಣೆಯ ಕಾರ್ಯಕ್ರಮವನ್ನು ಆಯೋಜಿಸುವುದು.
ಜಂತು ಹುಳು ನಿವಾರಣಾ ಮಾತ್ರಗಳನ್ನು ಬಳಸುವ ಕ್ರಮ:-
1. ಸದರಿ ದಿನಾಚರಣೆಯಂದು ಮಧ್ಯಾಹ್ನ ಉಪಾಹಾರ ನೀಡಿದ / ಸ್ವೀಕರಿಸಿದ ನಂತರ ಅರ್ಧ ಗಂಟೆ ಸಮಯ ಕಳೆದ ಕೂಡಲೇ ಎಲ್ಲಾ ಶಾಲಾ ಮಕ್ಕಳನ್ನು ತರಗತಿವಾರು ಸಾಲಾಗಿ ಕುಳ್ಳಿರಿಸಿ ಆಯಾ ತರಗತಿಯ ಶಿಕ್ಷಕರ ಸಮಕ್ಷಮದಲ್ಲಿ ಮತ್ತು ಮಾರ್ಗದರ್ಶನದಲ್ಲಿ ಪ್ರತಿಯೊಬ್ಬ ಮಗುವಿಗೆ ತಲಾ ಒಬ್ಬರಿಗೆ ಒಂದು ಮಾತ್ರೆಯಂತೆ ಮಾತ್ರೆ ವಿತರಿಸಿ, ಸ್ವೀಕರಿಸುವಂತೆ ಮಾಡುವುದು.
2. ಪ್ರತಿ ವಿದ್ಯಾರ್ಥಿಯು ಮಾತ್ರೆಯನ್ನು ಚೀಪುವಂತೆ, ಕಡಿದು ಸರಿಯಾಗಿ ಜಗಿದು ನೀರು ಕುಡಿಯುತ್ತಾ, ಸೇವಿಸುವಂತೆ ಸೂಚಿಸುವುದು. ಪ್ರತಿಯೊಬ್ಬ ಶಿಕ್ಷಕರು ಸಹ ಒಂದು ಮಾತ್ರೆಯನ್ನು ಮಕ್ಕಳ ಎದುರಿಗೆ ತಾವು ಸ್ವತಃ ಸ್ವೀಕರಿಸುತ್ತಾ, ಜಗಿದು ನೀರಿನೊಂದಿಗೆ ಸ್ವೀಕರಿಸುವುದನ್ನು ಪ್ರದರ್ಶಿಸಿ, ಸೂಕ್ತ ಮಾರ್ಗದರ್ಶನ ನೀಡಿ ವಿತರಣೆಯ ಕಾರ್ಯಕ್ರಮವನ್ನು ಕೈಗೊಳ್ಳುವುದು.
3. ಮಾತ್ರೆ ನುಂಗಿದ ನಂತರ ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಯ ಉಂಟಾದಾಗ ಆಶಾ ಕಾರ್ಯಕರ್ತೆಯರು, ಆರ್.ಬಿ.ಎಸ್. ಕೆ. ಪ್ರತಿ ನಿಧಿಗಳು / ತಂಡದ ತಜ್ಞ ವೈದ್ಯರು ಅಥವಾ ಹತ್ತಿರದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನು (THO), ಆರೋಗ್ಯ ಶಿಕ್ಷಣ ಅಧಿಕಾರಿಗಳನ್ನು (HEO) ತಕ್ಷಣ ಸಂಪರ್ಕಿಸಿ ಅಗತ್ಯ ತುರ್ತು ಚಿಕಿತ್ಸೆಯನ್ನು ಒದಗಿಸಲು ಕ್ರಮವಹಿಸುವುದು.
4. ಮಾಪ್ ಅಪ್ ದಿನದ ನಂತರವೂ ಜಂತು ಹುಳು ನಿವಾರಣಾ ಮಾತ್ರೆಗಳು ಶಾಲಾ ಕಾಲೇಜುಗಳಲ್ಲಿ ಉಳಿಕೆ ಆದಲ್ಲಿ ಮಾತ್ರೆಗಳನ್ನು ಆರ್.ಬಿ.ಎಸ್.ಕೆ. ಪ್ರತಿನಿಧಿಗಳು ಅಥವಾ ಹತ್ತಿರದ ಆರೋಗ್ಯ ಕೇಂದ್ರಕ್ಕೆ ತಪ್ಪದೇ ಹಿಂದಿರುಗಿಸುವುದು.
5. ಶಿಕ್ಷಕರು ಯಾವುದೇ ಕಾರಣಕ್ಕೂ ಮಗುವಿಗೆ ಒಂದಕ್ಕಿಂತ ಹೆಚ್ಚು ಮಾತ್ರೆಗಳನ್ನು ನೀಡಬಾರದು ಹಾಗೂ ಮನೆಗೆ ತೆಗೆದುಕೊಂಡು ಹೋಗದಂತೆ ಅವಕಾಶ ನೀಡಬಾರದು.
6. ಮಾತ್ರೆಗಳನ್ನು ಅನಾರೋಗ್ಯ ಇರುವಂತಹ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ವಿತರಿಸಬಾರದು.
ಮೇಲ್ವಿಚಾರಣಾ ಕ್ರಮ;-
1. ಶಾಲಾ ಹಂತದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಜಂತು ಹುಳು ನಿವಾರಣಾ ಮಾತ್ರೆಯಾಗಿ, Albendazole (400 mg) ಮಾತ್ರೆಯನ್ನು ನೀಡಿ ಚೀಪುವಂತೆ ಹಾಗೂ ವಿತರಣೆ ಮಾಡಿದ ಬಗ್ಗೆ, ಫಲಾನುಭವಿ ಮಗುವಿನ ಸೂಕ್ತ ದಾಖಲೆಯನ್ನು ನಿಗದಿತ ನಮೂನೆಗಳ ಮೂಲಕ ಆರೋಗ್ಯ ಇಲಾಖೆಗೆ ನೀಡಲು ತರಗತಿಗಳ ಶಿಕ್ಷಕರಿಗೆ ಕಡ್ಡಾಯವಾಗಿ ಸೂಚಿಸುವುದು.
2. ಕಾರ್ಯಕ್ರಮದ ಸಮಗ್ರ ಮೇಲ್ವಿಚಾರಣೆಗಾಗಿ ಕ್ಲಸ್ಟರ್ ಹಂತದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ (CRP) ಮತ್ತು ಬ್ಲಾಕ್ ಹಂತದಲ್ಲಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ (BRC), ತಾಲ್ಲೂಕು ಹಂತದ ದೈಹಿಕ-ಆರೋಗ್ಯ ಶಿಕ್ಷಣ ಶಿಕ್ಷಣಾಧಿಕಾರಿಯನ್ನು ಇವರನ್ನು ತಾಲ್ಲೂಕು ಹಂತದಲ್ಲಿ ಪ್ರತಿ ತಾಲ್ಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಹಂತದಲ್ಲಿ ಒಬ್ಬ ಪಿ.ಯು. ಕಾಲೇಜಿನ ಪ್ರಾಂಶುಪಾಲರನ್ನು ಆಯ್ತು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಇವರನ್ನು ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲು ಕ್ರಮವಹಿಸಿ ನೇಮಿಸಿ, ನೀಯೋಜಿಸಿ ಸೂಕ್ತ ಮೇಲ್ವಿಚಾರಣೆಗೆ ಏರ್ಪಾಡು ಮಾಡಿಕೊಳ್ಳುವುದು. ಇವರಿಗೆ ಕಾರ್ಯಕ್ರಮದ ಅನುಷ್ಠಾನದ ನಿರ್ವಹಣೆ ಮತ್ತು ಮೇಲ್ವಿಚಾರಣೆಯ ಬಗ್ಗೆ, ಸೂಕ್ತ ತರಬೇತಿ ಮತ್ತು ಪೂರ್ವಸಿದ್ಧತೆಯ ಬಗ್ಗೆ ಅಗತ್ಯ ಮಾಹಿತಿಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ನೆರವಿನಿಂದ ನೀಡುವುದು.
3. ಜಿಲ್ಲಾ ಹಂತದಲ್ಲಿ ಶಿಕ್ಷಣಾಧಿಕಾರಿಗಳು ಪಿ.ಎಂ.ಪೋಷಣ್ ಮತ್ತು ತಾಲ್ಲೂಕು ಹಂತದಲ್ಲಿ ಸಹಾಯಕ ನಿರ್ದೇಶಕರು ಪಿ.ಎಂ. ಪೋಷಣ್ ಇವರು ಮೇಲ್ವಿಚಾರಣೆ ಕ್ರಮವಹಿಸಿ ಅಗತ್ಯ ಸಹಕಾರ ನೀಡುವುದು. ಆರೋಗ್ಯ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾರ್ಯಕ್ರಮದ ಆಚರಣೆ ಮತ್ತು ವಿತರಣೆಯ ಪ್ರಗತಿಯ ಬಗ್ಗೆ ಮಾಹಿತಿ ನೀಡುವುದು.
4. ಜಿಲ್ಲಾ ಹಂತದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ), ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು, ಡಯಟ್ ಸಂಸ್ಥೆಯಪ್ರಾಂಶುಪಾಲರು ಹಾಗೂ ಪದನಿಮಿತ್ತ ಉಪನಿರ್ದೇಶಕರು (ಅಭಿವೃದ್ಧಿ) ಮತ್ತು ತಾಲ್ಲೂಕು ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಕ್ರಮದ ಸಮಗ್ರ ಮೇಲ್ವಿಚಾರಣೆ ನಿರ್ವಹಿಸುವುದು ಹಾಗೂ ಅಗತ್ಯ ಸಹಕಾರ ನೀಡುವುದು.
5. ದಿನಾಂಕ 09.12.2024 ರಂದು ಮತ್ತು ದಿನಾಂಕ 16.12.2024 ರಂದು ನಿರ್ವಹಣೆಯಲ್ಲಿ ಏನಾದರೂ ಅಡಚಣೆ, ಸಂದೇಹಗಳಿದ್ದಲ್ಲಿ ಮಾತ್ರೆಗಳ ವಿತರಣೆಯಲ್ಲಿ ಕೊರತೆಯಾದಲ್ಲಿ ಮತ್ತು ವಿತರಣೆಯ ಪರಿಪೂರ್ಣತೆಯ ಬಗ್ಗೆ, ಆಯಾ ವಲಯದ / ತಾಲ್ಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳು ಸೂಕ್ತ ಮೇಲ್ವಿಚಾರಣೆ ನಡೆಸಿ ತಾಲ್ಲೂಕು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಂಡು ಅಗತ್ಯ ಕ್ರಮವಹಿಸುವುದು.