ಬೆಂಗಳೂರು : ರಾಜ್ಯದಲ್ಲಿ ಇತ್ತೀಚಿಗೆ ಕೃಷಿಹೊಂಡಗಳಲ್ಲಿ ಬಿದ್ದು ಮಕ್ಕಳು ಸಾವನ್ನಪುತ್ತಿರುವ ಪ್ರಕರಣಗಳನ್ನು ತಡೆಯುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ಎಲ್ಲಾ ಕೃಷಿಹೊಂಡಗಳಿಗೆ ರಕ್ಷಣಾ ಬೇಲಿ (Fencing) ನಿರ್ಮಿಸಲು ಸೂಚನೆ ನೀಡಲಾಗಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೃಷಿಹೊಂಡಗಳಲ್ಲಿ ಮಕ್ಕಳು ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳು ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಸಾಕಷ್ಟು ದೂರು ದಾಖಲಾಗುತ್ತಿರುವುದು ಕಂಡುಬಂದಿದ್ದು ಹಾಗೂ ತೋಟಗಾರಿಕೆ ಇಲಾಖೆಯಿಂದ ನೀಡಲಾಗುತ್ತಿರುವ ಕೃಷಿಹೊಂಡಗಳಲ್ಲಿ ಜೀವಹಾನಿ ತಪ್ಪಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್-ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಈ ಹಿಂದೆ ನೀಡಲಾದ ಎಲ್ಲಾ ಕೃಷಿಹೊಂಡಗಳಿಗೆ ರಕ್ಷಣಾ ಬೇಲಿ (Fencing) ನಿರ್ಮಿಸಲು ಫಲಾನುಭವಿಗಳಿಗೆ ಅರಿವು ಮೂಡಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಲಾಗಿದೆ ಹಾಗೂ ಮುಂದಿನ ದಿನಗಳಲ್ಲಿ ನಿರ್ಮಿಸುವ ಕೃಷಿಹೊಂಡಗಳ ಸುತ್ತಲೂ ರಕ್ಷಣಾ ಬೇಲಿಯನ್ನು ಪರಿಣಾಮಕಾರಿಯಾಗಿ ಅಳವಡಿಸಲು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಹಾಗೂ ರಕ್ಷಣಾ ಬೇಲಿ ಅಳವಡಿಸಿದ ನಂತರ ಸಹಾಯಧನವನ್ನು ವಿತರಿಸಲು ತಿಳಿಸಲಾಗಿದೆ.
ರಕ್ಷಣಾ ಬೇಲಿಯಲ್ಲದೆ, ಇನ್ನಿತರ ಕ್ರಮಗಳಾದ ನೀರಿನಲ್ಲಿ ತೇಲುವ ಟ್ಯೂಬ್ ಗಳನ್ನು ಬಿಡುವುದು, ಹೊಂಡಗಳ ಮೇಲ್ಬಾಗದಲ್ಲಿ ಪಕ್ಷಿ ನಿರೋದಕ ಬಲೆ (Anti bird net) ಅಳವಡಿಸುವುದು, ನೀರಿನಲ್ಲಿ 2 ರಿಂದ 3 ಹಗ್ಗಗಳನ್ನು ಕಟ್ಟುವುದು, ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ಇತ್ಯಾದಿ ಮುನ್ನೆಚರಿಕೆ ಕ್ರಮಗಳನ್ನು ರೈತರು ಅಳವಡಿಸಿಕೊಳ್ಳಲು ಮನವರಿಕೆ ಮಾಡುವುದು ಹಾಗೂ ತದ ನಂತರವೇ ಇನ್ನಿತರ ಸಹಾಯಧನಗಳನ್ನು ನೀಡಲು ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ.