ಬೆಂಗಳೂರು : ರಾಜ್ಯದ 1-10ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಶಿಕ್ಷಣ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿಯೂ ಪ್ರತಿ ಅಧ್ಯಾಯ ಮುಗಿದ ನಂತರ ಪರೀಕ್ಷೆ ನಡೆಸಲು ಹೊಸ ಮೌಲ್ಯಮಾಪನ ಪದ್ಧತಿ ಪ್ರಾರಂಭಿಸಲು ಸರ್ಕಾರಕ್ಕೆ ಹೊಸ ಯೋಜನೆ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ
ಯೋಜನೆಯ ಪ್ರಕಾರ ಪ್ರತಿ ಪಾಠ ಮುಗಿದ ನಂತರ ವಿದ್ಯಾರ್ಥಿಗಳಿಗೆ ಸಣ್ಣ ಪರೀಕ್ಷೆಗಳು ಮತ್ತು ರಸಪ್ರಶ್ನೆಗಳನ್ನು ನೀಡಲಾಗುವುದು. ಇವುಗಳನ್ನು ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಸುಲಭವಾಗಿ ಮೌಲ್ಯಮಾಪನ ಮಾಡಲು ಅನುಕೂಲವಾಗುವಂತೆ ಬಹು ಆಯ್ಕೆ ಮಾದರಿ ಪ್ರಶ್ನೆಗಳಿಂದ ಕೂಡಿದ ಪರೀಕ್ಷೆಗಳನ್ನು ಓಎಂಆರ್ ಶೀಟ್ ಅಥವಾ ತತ್ಸಮಾನ ಶೀಟ್ ಟ್ ನಲ್ಲಿ ನಡೆಸಲಾಗುವುದು. ಇದಕ್ಕಾಗಿ ಶಾಲಾ ಶಿಕ್ಷಣ ಸಚಿವಾಲಯದ ವಿದ್ಯಾ ಸಮೀಕ್ಷಾ ಮೊಬೈಲ್ ಅಪ್ಲಿಕೇಶನ್ ಕೇಂದ್ರವನ್ನು ಶಾಲಾ ಶಿಕ್ಷಣ ಇಲಾಖೆ ಕಸ್ಟಮೈಸ್ ಮಾಡಲು ಆರಂಭಿಸಿದೆ.
ಪ್ರಸ್ತುತ ಏಕಕಾಲೀನ ಮೌಲ್ಯಮಾಪನ ವಿಧಾನ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಎಷ್ಟು ಕಲಿತಿದ್ದಾರೆ ಎಂಬುದನ್ನು ತಕ್ಷಣವೇ ತಿಳಿಯಲು ಯಾವುದೇ ವಿಧಾನವಿಲ್ಲ. ಹೀಗಾಗಿ ಪ್ರತಿ ಪಾಠ ಮುಗಿದ ನಂತರ ಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಅರ್ಥ ಮಾಡಿಕೊಳ್ಳಲು, ಗೊಂದಲ ಸರಿಪಡಿಸಿಕೊಳ್ಳಲು ಹೊಸ ವಿಧಾನದಿಂದ ಅನುಕೂಲವಾಗುತ್ತದೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿರುವ ರಚನಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನಗಳು ಮುಂದುವರೆಯಲಿದೆ.
1 ನೇ ತರಗತಿಯಿಂದ 10ನೇ ತರಗತಿವರೆಗಿನ ಎಲ್ಲಾ ತರಗತಿಗಳಿಗೆ ಹೊಸ ವ್ಯವಸ್ಥೆ ಅನ್ವಯವಾಗಲಿದೆ. ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಪರೀಕ್ಷೆ ಫಲಿತಾಂಶವನ್ನು ತಕ್ಷಣವೇ ನೀಡುವ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗುತ್ತದೆ ಎನ್ನಲಾಗಿದೆ.