ಬೆಂಗಳೂರು :ಸರ್ಕಾರದ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ಪಿಆರ್ಐ, ನಿಗಮ ಮಂಡಳಿಗಳು. ಸೊಸೈಟಿಗಳು, ವಿಶ್ವವಿದ್ಯಾನಿಲಯಗಳು ಹಾಗೂ ಇತರೆ ರಾಜ್ಯ ಸ್ವಾಯತ್ತ ಸಂಸ್ಥೆಗಳು ಬ್ಯಾಂಕ್ ಖಾತೆಗಳನ್ನು ತೆರೆಯುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಉಲ್ಲೇಖಿತ ಸರ್ಕಾರದ ಆದೇಶದಲ್ಲಿ, ಸರ್ಕಾರದ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ಪಿಆರ್ಐ, ನಿಗಮ ಮಂಡಳಿಗಳು, ಸೊಸೈಟಿಗಳು, ವಿಶ್ವವಿದ್ಯಾನಿಲಯಗಳು ಹಾಗೂ ಇತರೆ ರಾಜ್ಯ ಸ್ವಾಯತ್ತ ಸಂಸ್ಥೆಗಳು ಸರ್ಕಾರದ ಅನುದಾನವನ್ನು ನಿರ್ವಹಿಸಲು ಬ್ಯಾಂಕ್ ಖಾತೆಗಳನ್ನು ತೆರೆಯುವ ಹಾಗೂ ನಿರ್ವಹಿಸುವ ಬಗ್ಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ. ಅದರಂತೆ ಸರ್ಕಾರದ ಇಲಾಖೆಗಳು ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆದು ವ್ಯವಹರಿಸಲು, ಸಕ್ಷಮ ಪ್ರಾಧಿಕಾರಿಗಳು (ಆಡಳಿತ ಇಲಾಖೆಗಳು) ಆರ್ಥಿಕ ಇಲಾಖೆಯ ಸಹಮತಿ ಪಡೆದು ಆದೇಶವನ್ನು ಹೊರಡಿಸಬೇಕಾಗಿರುತ್ತದೆ. ಸದರಿ ಆದೇಶವು, ಖಾತೆಯನ್ನು ತೆರೆಯವ ಉದ್ದೇಶ, ಯೋಜನೆಯ ಹೆಸರು, ವ್ಯಾಪ್ತಿ, ಖಾತೆಯ ವಿಧ, ಅಧಿಕೃತ ಸಹಿದಾರರು, ಕಾರ್ಯಾಚರಣೆಯ ಮಾರ್ಗಸೂಚಿಗಳು ಇತ್ಯಾದಿ ವಿವರಗಳನ್ನು ಒಳಗೊಂಡಿರಬೇಕಾಗುತ್ತದೆ.
ಸರ್ಕಾರದ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ಪಿಆರ್ಐ, ನಿಗಮ ಮಂಡಳಿಗಳು, ಸೊಸೈಟಿಗಳು, ವಿಶ್ವವಿದ್ಯಾನಿಲಯಗಳು ಹಾಗೂ ರಾಜ್ಯ ಸ್ವಾಯತ್ತ ಸಂಸ್ಥೆಗಳು ನಿರ್ವಹಿಸುತ್ತಿರುವ ಬ್ಯಾಂಕ್ ಖಾತೆಗಳ ಮಾಹಿತಿಗಳ ವಿವರಗಳನ್ನು ಕೇಂದ್ರಿಕೃತವಾಗಿ ಸಂಗ್ರಹಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಖಜಾನೆ-2 ರಲ್ಲಿ ಮಾಡ್ಯೂಲ್ ಒಂದನ್ನು ಅಭಿವೃದ್ಧಿಗೊಳಿಸಲಾಗಿದೆ (ಕಾರ್ಯಹರಿವು (Flow chart) ನಕ್ಷೆಯನ್ನು ಅನುಬಂಧದಲ್ಲಿ ನೀಡಲಾಗಿದೆ).
ಸದರಿ ಮಾಡ್ಯೂಲ್ನಲ್ಲಿ ಪ್ರತಿಯೋರ್ವ ಡಿಡಿಓರವರು ಅವರ ಹಾಗೂ ಅವರ ವ್ಯಾಪ್ತಿಗೊಳಪಡುವ ಇಲಾಖೆಗಳು. ಸ್ಥಳೀಯ ಸಂಸ್ಥೆಗಳು, ಪಿಆರ್ಐ, ನಿಗಮ ಮಂಡಳಿಗಳು, ಸೊಸೈಟಿಗಳು, ವಿಶ್ವವಿದ್ಯಾನಿಲಯಗಳು ಹಾಗೂ ಇತರೆ ರಾಜ್ಯ ಸ್ವಾಯತ್ತ ಸಂಸ್ಥೆಗಳು ಹೊಂದಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ದಾಖಲಿಸಲು ಸೂಚಿಸಿದೆ. ಬ್ಯಾಂಕ್ ಖಾತೆಗಳನ್ನು ನಿರ್ವಹಿಸದೇ ಇರುವ ಡಿಡಿಓರವರು ಸಹ ಸದರಿ ಮಾಡ್ಯೂಲ್ ನಲ್ಲಿ ಶೂನ್ಯ ವರದಿಯನ್ನು ದಾಖಲಿಸಲು ಸೂಚಿಸಲಾಗಿದೆ.









