ಬೆಂಗಳೂರು : 2026ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1ಕ್ಕೆ ನೋಂದಣಿಯಾಗಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳ ಮಾಹಿತಿಗಳನ್ನು ಪರಿಶೀಲಿಸಿಕೊಳ್ಳುವ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯದ ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಂದ 2026 ರ ಎಸ್.ಎಸ್.ಎಲ್.ಸಿ ಪರೀಕ್ಷೆಗೆ 901080 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿರುತ್ತಾರೆ. ಈ ವಿದ್ಯಾರ್ಥಿಗಳ ಮಾಹಿತಿಗಳು ಸರಿಯಿರುವ ಬಗ್ಗೆ ಪರಿಶೀಲಿಸಿಕೊಳ್ಳಲು ನೋಂದಣಿ ಮಾಡಿಕೊಂಡ 15943 ಶಾಲೆಗಳಿಗೆ ಮಾಹಿತಿಯನ್ನು ಲಭ್ಯಗೊಳಿಸಿದೆ.
ಶಾಲೆಗಳ ಮುಖ್ಯಸ್ಥರು ಮಾಹಿತಿ ಪರಿಶೀಲನಾ ನಮೂನೆಗಳನ್ನು ಡೌನ್‌ಲೋಡ್ ಮಾಡಿಕೊಂಡು, ತಮ್ಮ ಶಾಲೆಯ ಮೂಲಕ ನೋಂದಣಿ ಮಾಡಿದ್ದ ಶಾಲಾ ವಿದ್ಯಾರ್ಥಿಗಳು, ಮಂಡಲಿ ನಿಯಮಗಳ ಅವಕಾಶಗಳಂತೆ 2026 ರ ಎಸ್.ಎಸ್.ಎಲ್.ಸಿ ಪರೀಕ್ಷೆಗೆ Public domain ಮೂಲಕ ವಿದ್ಯಾರ್ಥಿಗಳ ಲಾಗಿನ್ನಲ್ಲಿ ನೋಂದಣಿ ಮಾಡಿಕೊಂಡಿರುವ ಪುನರಾವರ್ತಿತ ವಿದ್ಯಾರ್ಥಿಗಳು, ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು ಮತ್ತು ಮಂಡಲಿ ತಂತ್ರಾಂಶದ ಮೂಲಕ ಸರ್ಕಾರಿ ಶಾಲೆಗೆ allot ಆದ ಖಾಸಗಿ ಅಭ್ಯರ್ಥಿಗಳ ಮಾಹಿತಿ ನಮೂನೆಗಳು ಇರುವ ಬಗ್ಗೆ ಪರಿಶೀಲಿಸಿಕೊಂಡು, ಯಾವುದಾದರೂವಿದ್ಯಾರ್ಥಿಗಳ ಮಾಹಿತಿ ಬಿಟ್ಟು ಹೋಗಿದ್ದಲ್ಲಿ ತಕ್ಷಣ ಮಂಡಲಿಯ ಪರಿಶೀಲನಾ ಶಾಖೆಗಳಿಗೆ ಮಾಹಿತಿ ನೀಡಬೇಕು.
ಡೌನ್‌ಲೋಡ್ ಮಾಡಿಕೊಂಡ ಪ್ರತಿ ವಿದ್ಯಾರ್ಥಿಯ ಮಾಹಿತಿ ಪರಿಶೀಲನಾ ನಮೂನೆಗಳನ್ನು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಗಮನಕ್ಕೆ ತರಬೇಕು. ವಿದ್ಯಾರ್ಥಿಗಳ ವಿವರಗಳನ್ನು ಪರಿಶೀಲಿಸಿ ಅಂತಿಮಗೊಳಿಸಲು ಇದು ಕೊನೆಯ ಅವಕಾಶವಾಗಿದ್ದು, ಇದೇ ವಿವರಗಳು ವಿದ್ಯಾರ್ಥಿಗಳ ಪ್ರವೇಶ ಪತ್ರ ಹಾಗೂ ಅಂಕಪಟ್ಟಿಗಳಲ್ಲಿ ಮುದ್ರಣವಾಗುತ್ತವೆ. ಮುಂದಿನ ದಿನಗಳಲ್ಲಿ ಯಾವುದೇ ವಿದ್ಯಾರ್ಥಿಯ ಮಾಹಿತಿ ಪರಿಶೀಲನೆ ಮಾಡದೆ ತಿದ್ದುಪಡಿಗಳು ವರದಿಯಾದಲ್ಲಿ ಮುಖ್ಯ ಶಿಕ್ಷಕರನ್ನೇ ಹೊಣೆಗಾರರನ್ನಾಗಿಸಲಾಗುವುದು.
1. ಮಂಡಲಿಯ ಜಾಲತಾಣ https://kseab.karnataka.gov.in ನ ಶಾಲಾ ಲಾಗಿನ್ ನಲ್ಲಿ Download Student Information Option . Download Student Information (school wise) ಆಯ್ಕೆಯ ಮೂಲಕ ಡೌನ್‌ಲೋಡ್ ಮಾಡಬಹುದಾಗಿದೆ.
2. ಖಾಸಗಿ ಹಾಗೂ ಪುನರಾವರ್ತಿತ ಅಭ್ಯರ್ಥಿಗಳ ಮಾಹಿತಿ ಪರಿಶೀಲನಾ ನಮೂನೆಗಳನ್ನು ಆಯಾ ಅಭ್ಯರ್ಥಿಗಳ ಲಾಗಿನ್ ಹಾಗೂ ಶಾಲಾ ಲಾಗಿನ್‌ನಲ್ಲಿ ಲಭ್ಯಗೊಳಿಸಿದೆ. ಖಾಸಗಿ ಹಾಗೂ ಪುನರಾವರ್ತಿತ ಅಭ್ಯರ್ಥಿಗಳ ಮಾಹಿತಿಯಲ್ಲಿ ಏನಾದರೂ ತಿದ್ದುಪಡಿಗಳಿದ್ದಲ್ಲಿ, ಸಂಬಂಧಿಸಿದ ಶಾಲಾ ಮುಖ್ಯಸ್ಥರು ಲಭ್ಯ ದಾಖಲೆಗಳನ್ನು ಆಧರಿಸಿ ಇಲ್ಲವೇ ದಾಖಲೆಗಳನ್ನು ಪಡೆದು ನಂತರ ತಿದ್ದುಪಡಿ ಮಾಡಲು ತಿಳಿಸಿದೆ.









