ಚಿಕ್ಕಬಳ್ಳಾಪುರ : ಇಂದು ನಂದಿಬೆಟ್ಟದಲ್ಲಿ ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು, ಹಲವು ಮಹತ್ವದ ನಿರ್ಣಯ ಘೋಷಣೆಯಾಗಲಿದೆ.
ಇಂದು ಚಿಕ್ಕಬಳ್ಳಾಪುರದಲ್ಲಿರುವ ನಂದಿಬೆಟ್ಟದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ನಂದಿಬೆಟ್ಟದ ಮಯೂರ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ.
ಪಡಿತರ ಚೀಟಿದಾರರಿಗೆ ನೀಡುತ್ತಿರುವ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಆಹಾರದ ಕಿಟ್ ನೀಡಲು ಆಹಾರ ಇಲಾಖೆಯಿಂದ ಪ್ರಸ್ತಾವನೆ ಬಂದಿದೆ. ಸಚಿವ ಸಂಪುಟದಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕಿದರೆ ಸದ್ಯದಲ್ಲೇ ಜಾರಿಗೆ ತರುವ ಸಾಧ್ಯತೆಯಿದೆ. ಇಂದು ನಂದಿಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.
ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಹೆಸರನ್ನು ಭಾಗ್ಯನಗರ ಎಂದು ಮರುನಾಮಕರಣ ಸಂಪುಟ ಸಭೆಯಲ್ಲಿ ನಿರ್ಧಾರವಾಗುವ ನಿರೀಕ್ಷೆ ಇದೆ. ಪಲ್ಲಿ ಎಂದರೆ ತೆಲುಗು ಭಾಷೆಯಲ್ಲಿ ಹಳ್ಳಿಎಂದರ್ಥ.ಹೀಗಾಗಿ ಈ ಹೆಸರನ್ನು ಬದಲಿಸಬೇಕು ಎಂದು 2020ರಲ್ಲಿ ತಾಲೂಕಿನಲ್ಲಿ ಅಭಿಯಾನವೇ ಶುರುವಾಗಿತ್ತು.