ಬೆಂಗಳೂರು : ರಾಜ್ಯದಲ್ಲಿ ಕಾವೇರಿ ತಂತ್ರಾಂಶದ ಮೂಲಕ ಸಾರ್ವಜನಿಕರಿಗೆ ಡಿಜಿಟಲ್ ಇ-ಸ್ಟಾಂಪ್ ಒದಗಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರವು ಕರ್ನಾಟಕ ಮುದ್ರಾಂಕ (ಡಿಜಿಟಲ್ ಇ-ಸ್ಟಾಂಪ್) ನಿಯಮಗಳು 2025ರ ನಿಯಮ (3) ರ ಪ್ರಕಾರ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶವನ್ನು “ಡಿಜಿಟಲ್ ಇ-ಸ್ಟ್ಯಾಂಪ್ ಅಪ್ಲಿಕೇಶನ್”ಎಂದು ಅಧಿಸೂಚಿಸಿ ಹೊರಡಿಸಲಾಗಿದೆ.
ಆದೇಶದಲ್ಲಿ ಏನಿದೆ?
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶದಲ್ಲಿ ನಾಗರೀಕರು ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ, ಮುದ್ರಾಂಕ ಶುಲ್ಕದಲ್ಲಿ ವಂಚನೆ ಮತ್ತು ಭದ್ರತಾ ಕೊರತೆಯನ್ನು ಸಂಪೂರ್ಣವಾಗಿ ತೆಗೆದುಹಾಕಲು ನಕಲಿ ಸಹಿ, ನಕಲಿ ಪ್ರತಿ ಮತ್ತು ತಪ್ಪು ವರ್ಗೀಕರಣದಿಂದ ಸರ್ಕಾರಕ್ಕೆ ಸೇರುವ ಮುದ್ರಾಂಕ ಶುಲ್ಕವನ್ನು ತಪ್ಪಿಸುವ ಘಟನೆಗಳಿಂದ ಸರ್ಕಾರಕ್ಕೆ ಆದಾಯ ನಷ್ಟವನ್ನು ಉಂಟು ಮಾಡುತ್ತಿರುವುದನ್ನು ಗಮನಿಸಿ, ಕರ್ನಾಟಕವು ಸಂಪೂರ್ಣ ಡಿಜಿಟಲ್ ನೋಂದಣಿ ವ್ಯವಸ್ಥೆಯತ್ತ ಸಾಗುತ್ತಿರುವುದರಿಂದ, ಮುದ್ರಾಂಕ ಶುಲ್ಕದಲ್ಲಿ ವಂಚನೆ ಮತ್ತು ಭದ್ರತಾ ಕೊರತೆಯನ್ನು ಸಂಪೂರ್ಣ ತೊಡೆದು ಹಾಕುವ ನಿಟ್ಟಿನಲ್ಲಿ ಕರ್ನಾಟಕ ಮುದ್ರಾಂಕ (ಡಿಜಿಟಲ್ ಇ-ಸ್ಟ್ಯಾಂಪ್) ನಿಯಮಗಳು 2025ನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ/36/ಎಂಎನ್ಎಂಯು/2025 ದಿನಾಂಕ:07-08-2025 ರಲ್ಲಿ ರಚಿಸಲಾಗಿರುತ್ತದೆ. ಈ ನಿಯಮಗಳ ಪ್ರಕಾರ ನಾಗರೀಕರು ಮನೆಯಿಂದಲೇ ಆನ್ಲೈನ್ ಮೂಲಕ ಡಿಜಿಟಲ್ ಇ-ಸ್ಟ್ಯಾಂಪ್ ಅನ್ನು ಪಡೆಯಬಹುದಾಗಿರುತ್ತದೆ.









