ಬೆಳಗಾವಿ : ಕೈಗಾರಿಕೆಗಳ ತ್ಯಾಜ್ಯ ವಿಲೇವಾರಿಗೆ ಅಗತ್ಯ ವ್ಯವಸ್ಥೆಯನ್ನು ಕಾಲ ಕಾಲಕ್ಕೆ ಪ್ರಾದೇಶಿಕ ಕಛೇರಿಯ ಅಧಿಕಾರಿಗಳು ಪರಿವೀಕ್ಷಿಸಿ, ನ್ಯೂನತೆಗಳು ಕಂಡು ಬಂದಲ್ಲಿ ಕಾಯಿದೆಗಳ ಮಾನದಂಡ ಅನುಸರಿಸಿ, ಜಲ ಕಾಯ್ದೆ,ವಾಯು ಕಾಯ್ದೆ ಅಡಿಯಲ್ಲಿ ಮುಚ್ಚುವ ಆದೇಶ ನೀಡಲಾಗುವುದು ಎಂದು ಅರಣ್ಯ ಜೀವಿಪರಿಸ್ಥಿತಿ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
ಅವರು ವಿಧಾನ ಪರಿಷತ್ತಿನಲ್ಲಿ ಸದಸ್ಯ ಡಾ. ಧನಂಜಯ ಸರ್ಜಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕೈಗಾರಿಕೆಗಳಿಗೆ ಷರತ್ತುಬದ್ದ ಸಮ್ಮತಿ ಪತ್ರಗಳನ್ನು ನೀಡುತ್ತಿದ್ದು, ಮಂಡಳಿಯ ಷರತ್ತುಗಳ ಅನ್ವಯ ತ್ಯಾಜ್ಯ ನೀರನ್ನು ಮಂಡಳಿಯು ನಿಗದಿಪಡಿಸಿರುವ ಮಾನದಂಡಗಳಿಗೆ ಕೈಗಾರಿಕೆಯಲ್ಲಿ ಸ್ಥಾಪಿತವಾಗಿರುವ ಶುದ್ಧಿಕರಣ ಘಟಕಗಳಲ್ಲಿ ಶುದ್ಧಿಕರಿಸಿ,ಶುದ್ಧಿಕರಿಸಿದ ನೀರನ್ನು ತೋಟಗಾರಿಕೆ ಹಾಗೂ ವ್ಯವಸಾಯಕ್ಕೆ ಬಳಸಬೇಕಾಗಿರುತ್ತದೆ.
ಸಣ್ಣ ಕೈಗಾರಿಕೆಗಳು ಕಾರ್ಯಚಟುವಟಿಕೆಗಳಿಂದ ತಮ್ಮ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಮಂಡಳಿಯಿಂದ ಸಮ್ಮತಿ ಪಡೆದು ಕಾರ್ಯನಿರ್ವಹಿಸುತ್ತಿರುವ ಸಾಮೂಹಿಕ ಶುದ್ಧಿಕರಣ ಘಟಕಗಳಿಗೆ ನೀಡಬೇಕಾಗಿರುತ್ತದೆ.
ಅಪಾಯಕಾರಿ ತ್ಯಾಜ್ಯಗಳನ್ನು ಮಂಡಳಿಯಿಂದ ಅಧಿಕಾರ ಪತ್ರ ಪಡೆದ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ನೀಡಬೇಕಾಗಿರುತ್ತದೆ. ಹಾಗೂ ಕೈಗಾರಿಕೆಗಳಿಂದ ಉತ್ಪತ್ತಿಯಾದ ಇತರ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಿರುತ್ತದೆ ಎಂದು ತಿಳಿಸಿದರು.