ಬೆಂಗಳೂರು : ರಾಜ್ಯದಲ್ಲಿ ಕಣ್ತಪ್ಪಿನಿಂದ ಕಂದಾಯ ಗ್ರಾಮದ ಪಟ್ಟಿಯಿಂದ ಬಿಟ್ಟು ಹೋಗಿರುವ ತಾಂಡಾ, ಹಟ್ಟಿ, ಹಾಡಿ, ಗೊಲ್ಲರಹಟ್ಟಿಗಳನ್ನು ಗುರುತಿಸಿ ಶೀಘ್ರದಲ್ಲಿ ಕಂದಾಯ ಗ್ರಾಮಗಳಾಗಿ ಘೋಷಿಸಿ ಪ್ರಾಥಮಿಕ ಅಧಿಸೂಚನೆ ಹೊರಡಿಸುವಂತೆ ಕಂದಾಯ ಸಚಿವ. ಕೃಷ್ಣ ಬೈರೇಗೌಡ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಅವರು, ಕಂದಾಯ ಗ್ರಾಮಗಳ ಘೋಷಣೆ ಬಡವರ ಕೆಲಸವಾಗಿದ್ದು, ಅದರ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಕೂಡಲೇ ಗೊಲ್ಲರಹಟ್ಟಿ, ತಾಂಡಾ, ಹಟ್ಟಿ, ಹಾಡಿಗಳನ್ನು ಗುರುತಿಸಿ ಕಂದಾಯ ಗ್ರಾಮದ ಸ್ಥಾನಮಾನ ನೀಡಿ ಅಧಿಸೂಚನೆ ಪ್ರಕಟಿಸಬೇಕು. ನಿಯಮದಂತೆ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.
ಕಂದಾಯ ಗ್ರಾಮದ ಸೌಲಭ್ಯ ಪಡೆಯಲು ಅರ್ಹವಾಗಿರುವ ತಾಂಡಾ, ಹಟ್ಟಿ, ಗೊಲ್ಲರಹಟ್ಟಿಗಳನ್ನು ಗುರುತಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 1.11 ಲಕ್ಷ ಹಾಡಿ, ಹಟ್ಟಿ, ತಾಂಡಾ ನಿವಾಸಿಗಳಿಗೆ ರಾಜ್ಯ ಸರ್ಕಾರ ಹಕ್ಕುಪತ್ರ ನೀಡಿದೆ. ಹಾಗೆಯೇ, ಮುಂದಿನ ಒಂದು ವರ್ಷದಲ್ಲಿ ಇನ್ನೂ 1 ಲಕ್ಷ ಜನರಿಗೆ ಹಕ್ಕುಪತ್ರ ನೀಡುವ ಗುರಿ ಸರ್ಕಾರ ಹೊಂದಿದೆ. ಹೀಗಾಗಿ ಅಧಿಕಾರಿಗಳು ಆಸಕ್ತಿವಹಿಸಿ ತಾಂಡಾ ನಿಗಮ ಹಾಗೂ ಜಲಜೀವನ ಮಿಷನ್‌ನಿಂದ ಪಟ್ಟಿ ತರಿಸಿಕೊಂಡು ತಾಳೆ ಮಾಡಿ, ಬಿಟ್ಟು ಹೋಗಿರುವ ಹೋಗಿರುವ ಜನವಸತಿ ಪ್ರದೇಶಗಳನ್ನು ಗುರುತಿಸಿ ಕಂದಾಯ ಗ್ರಾಮಗಳು ಎಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಎಂದು ಆದೇಶಿಸಿದರು.