ಬೆಂಗಳೂರು : ರಾಜ್ಯ ಸರ್ಕಾರವು ಜಮೀನು ಸರ್ವೆ ಕುರಿತಂತೆ ಮಹತ್ವದ ಕ್ರಮ ಕೈಗೊಂಡಿದ್ದು, ಇನ್ಮುಂದೆ ಕೇವಲ 10 ನಿಮಿಷಗಳಲ್ಲೇ ಆಧುನಿಕ ತಂತ್ರಜ್ಞಾನದ ಮೂಲಕ ಜಮೀನು ಸರ್ವೆ ಮಾಡಬಹುದು.
ಸರ್ವೇ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 465 ಭೂ ಮಾಪಕರಿಗೆ ಈ ಆಧುನಿಕ ತಂತ್ರಜ್ಞಾನವುಳ್ಳ ರೋವರ್ ಅನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ವಿತರಿಸಿದ್ದಾರೆ. ಈ ಮೂಲಕ ಕಂದಾಯ ಇಲಾಖೆಯು ಜಮೀನು ಸರ್ವೇ ಮಾಡುವ ವಿಧಾನದಲ್ಲಿ ಐತಿಹಾಸಿಕ ಬದಲಾವಣೆ ತಂದಿದ್ದು, ಚೈನ್ ಬದಲಿಗೆ ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್ ಉಪಕರಣದ ಮೂಲಕ ಸರ್ವೆ ಮಾಡಲಾಗುತ್ತದೆ.
ಸರ್ವೇ ಮಾಡಲು ಕನಿಷ್ಟ 70 ನಿಮಿಷ ಅದನ್ನು ನಕ್ಷೆ ಮಾಡಲು 3 ಗಂಟೆ ಸಮಯ ವ್ಯರ್ಥವಾಗುತ್ತಿತ್ತು. ಆದರೆ, ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್ ಈ ಕೆಲಸವನ್ನು ಕೇವಲ 10 ನಿಮಿಷಕ್ಕೆ ಮುಗಿಸಲಿದೆ. ಕಳೆದ 200 ವರ್ಷದಲ್ಲಿ ಪ್ರಪಂಚ ಇಷ್ಟು ಬದಲಾದರೂ ನಮ್ಮ ವಿಧಿ-ವಿಧಾನ ಹಾಗೆ ಇದೆ. ಆದರೆ ಇದೀಗ ಸರ್ವೇ ಕೆಲಸವನ್ನು ತಾಂತ್ರಿಕಗೊಳಿಸದೆ ಕೆಲಸ ಮಾಡಲು ಜನ ಇದ್ದಾರೆ ಎಂದು ಉಢಾಫೆಯಿಂದ ನೌಕರರ ಮೇಲೆ ಹೊರೆ ಹಾಕುವುದು ಅಮಾನವೀಯ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ನಡವಳಿಕೆ ಎಂದು ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ರೋವರ್ ಸರ್ವೇಯಲ್ಲಿ ಅಕ್ರಮಗಳಿಗೆ ಆಸ್ಪದ ಇರುವುದಿಲ್ಲ. ಹೀಗಾಗಿ ಇಲಾಖೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನರಿಗೆ ತ್ವರಿತ ಸರ್ವೇ ಮಾಡಿಕೊಡುವುದು ಹಾಗೂ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.