ಬೆಂಗಳೂರು: ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಚುನಾವಣೆಯನ್ನು ಘೋಷಣೆ ಮಾಡಲಾಗಿತ್ತು. ಈ ಬಳಿಕ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಆದರೇ ಸರ್ಕಾರಿ ನೌಕರ ಸಂಘದ ಆಡಳಿತ ಅಧಿಕಾರಿ ನೇಮಕಕ್ಕೆ ಹೈ ಕೋರ್ಟ್ ನಿಂದ ತಡೆಯಾಜ್ಞೆ ನೀಡಲಾಗಿದೆ.
ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಆತ್ಮೀಯ ರಾಜ್ಯದ ಸರ್ಕಾರಿ ನೌಕರ ಬಾಂಧವರೇ ಹಾಗೂ ಜಿಲ್ಲಾ-ತಾಲೂಕು ಅಧ್ಯಕ್ಷರುಗಳೇ, ಪದಾಧಿಕಾರಿಗಳೇ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಕಳೆದ ವಾರ ಆಡಳಿತಾಧಿಕಾರಿ ಯನ್ನು ನೇಮಿಸಿದ್ದ ಆದೇಶಕ್ಕೆ ಇಂದು ಕರ್ನಾಟಕ ಉಚ್ಚ ನ್ಯಾಯಾಲಯವು ಸುದೀರ್ಘ ವಿಚಾರಣೆಯನ್ನು ನಡೆಸಿತು ಎಂದಿದ್ದಾರೆ.
ಈ ವಿಚಾರಣೆ ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರಿ ನೌಕರ ಸಂಘಕ್ಕೆ ನೇಮಿಸಿದ್ದ ಆಡಳಿತಾಧಿಕಾರಿ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿ ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ದಿನಾಂಕ 16.10.2024ಕ್ಕೆ ಮುಂದೂಡಿತು ಎಂದು ತಿಳಿಸಿದ್ದಾರೆ.
ಅಂದಹಾಗೇ ದಿನಾಂಕ 07-10-2024ರಂದು ಆದೇಶದಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರ ಕಲಂ 27-ಎ ರನ್ವಯ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಕಬ್ಬನ್ ಉದ್ಯಾನವನ, ಬೆಂಗಳೂರು-560001, ಈ ಸಂಘಕ್ಕೆ ಸಿ.ಎನ್. ಮಂಜುನಾಥ್, ಕೆ.ಎ.ಎಸ್(ಆಯ್ಕೆ ಶ್ರೇಣಿ), ಪ್ರಧಾನ ವ್ಯವಸ್ಥಾಪಕರು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಇವರನ್ನು ಈ ಆದೇಶ ಹೊರಡಿಸಿದ ದಿನಾಂಕದಿಂದ ಹೊಸ ಆಡಳಿತ ಮಂಡಳಿ ರಚನೆಯಾಗುವವರೆಗೆ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಲಾಗಿತ್ತು. ಈಗ ಹೈಕೋರ್ಟ್ ಈ ಆಡಳಿತಾಧಿಕಾರಿ ನೇಮಕಕ್ಕೆ ತಡೆಯಾಜ್ಞೆಯನ್ನು ನೀಡಿದೆ.