ಬೆಂಗಳೂರು : ಹೃದಯಾಘಾತ ತಡೆಯಲು ಆರೋಗ್ಯ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ಪುನೀತ್ ರಾಜ್ಕುಮಾರ್ ʼಹೃದಯಜ್ಯೋತಿʼ ಯೋಜನೆ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಿಸಲಾಗಿದೆ.
ವರ್ಷಕ್ಕೊಮ್ಮೆ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೂ ಕನಿಷ್ಠ ಆರೋಗ್ಯ ತಪಾಸಣೆ ಹಾಗೂ ಖಾಸಗಿ ಕಂಪನಿ, ಕಾರ್ಖಾನೆ, ಉದ್ದಿಮೆಗಳ ನೌಕರರಿಗೆ ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣೆಗೆ ನಿರ್ದೇಶನ ನೀಡಲಾಗಿದೆ.
ಶಾಲಾ ಮಕ್ಕಳಿಗೆ ವರ್ಷಕ್ಕೊಮ್ಮೆ ಇಲಾಖೆಯಿಂದಲೇ ಆರೋಗ್ಯ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯದಲ್ಲಿ ಹೃದಯ ಸಂಬಂಧಿ ಪಾಠ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ.
ಯುವ ವರ್ಗದಲ್ಲಿ ಹೃದಯಾಘಾತ, ಹಠಾತ್ ಸಾವು ಸಂಭವಿಸುತ್ತಿರುವ ಕಾರಣ ಮುಂದಿನ ಶೈಕ್ಷಣಿಕ ವರ್ಷದಿಂದ ಹೃದಯಾಘಾತ ಹಾಗೂ ಹೃದಯದ ಆರೋಗ್ಯ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ವಿಚಾರವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲು ಚಿಂತನೆ ನಡೆದಿದೆ. ತಜ್ಞರ ಸಮಿತಿಯ ಶಿಫಾರಸ್ಸಿನಂತೆ ಕೈಗೊಳ್ಳಲಿರುವ ಎಲ್ಲ ಕ್ರಮಗಳ ಕುರಿತು ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿ ಮುಂದುವರಿಯಲಾಗುವುದು ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.