ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ವಿವಿಧ ‘ಗ್ಯಾರಂಟಿ’ ಯೋಜನೆಗಳ ಹಣ ಬಿಡುಗಡೆಗೆ ತಡೆ ನೀಡಬೇಕೆಂದು ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಗೃಹಲಕ್ಷ್ಮಿ, ಯುವನಿಧಿ, ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಗಳ ನಗದು ಬಿಡುಗಡೆಗೆ ಯಾವುದೇ ಅಡೆತಡೆ ಇರುವುದಿಲ್ಲ.ಉಪಚುನಾವಣೆ ಮುಗಿಯುವವರೆಗೆ ಈ ಯೋಜನೆಗಳ ಹಣ ಬಿಡುಗಡೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಅರ್ಜಿಯ ಹಿನ್ನೆಲೆ
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಸ್ವತಂತ್ರ ಅಭ್ಯರ್ಥಿ ಗೌತಮ್ ಕುಮಾರ್ ಜೈನ್ ಅವರು ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪ್ರಕಾರ, ಕಳೆದ ಆರೇಳು ತಿಂಗಳಿಂದ ಸ್ಥಗಿತಗೊಂಡಿದ್ದ ಗ್ಯಾರಂಟಿ ಯೋಜನೆಗಳ ಬಾಕಿ ಹಣವನ್ನು ಈಗ ಏಕಾಏಕಿ ಬಿಡುಗಡೆ ಮಾಡಲಾಗುತ್ತಿದೆ. ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ, ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆಗಳನ್ನು ಗುರಿಯಾಗಿಸಿಕೊಂಡು ಮತದಾರರನ್ನು ಸೆಳೆಯಲು ಸರ್ಕಾರ ಈ ಪ್ರಯತ್ನ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದರು.
ಆದರೆ, ಈ ವಾದವನ್ನು ಆಲಿಸಿದ ನ್ಯಾಯಾಲಯವು ಯೋಜನೆಗಳ ಹಣ ಬಿಡುಗಡೆಗೆ ತಡೆ ನೀಡಲು ನಿರಾಕರಿಸುವ ಮೂಲಕ ಸರ್ಕಾರಕ್ಕೆ ನೆಮ್ಮದಿ ನೀಡಿದೆ. ಇದರೊಂದಿಗೆ ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಹಣ ತಲುಪಲು ಇದ್ದ ಕಾನೂನು ತೊಡಕು ನಿವಾರಣೆಯಾದಂತಾಗಿದೆ.








