ಬೆಂಗಳೂರು : ದ್ವೇಷಭಾಷಣ ಮತ್ತು ದ್ವೇಷ ಅಪರಾಧಗಳು (ತಡೆಗಟ್ಟುವಿಕೆ) ಮಸೂದೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ತಡೆ ನೀಡಿದ್ದಾರೆ.
ಪ್ರತಿಪಕ್ಷಗಳ ವಿರೋಧದ ನಡುವೆಯೇ ಸರ್ಕಾರ ಕರ್ನಾಟಕ ದ್ವೇಷಭಾಷಣ ಮತ್ತು ದ್ವೇಷ ಅಪರಾಧಗಳು (ತಡೆಗಟ್ಟುವಿಕೆ) ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಿ ಲೋಕಭವನಕ್ಕೆ ಕಳುಹಿಸಿತ್ತು. ಬಳಿಕ ಬಿಜೆಪಿ, ಜೆಡಿಎಸ್ ಮುಖಂಡರು, ಸಹಿ ಮಾಡದಂತೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದರು. ಆದ್ದರಿಂದ ರಾಜ್ಯಪಾಲರು ಕೆಲ ಆಕ್ಷೇಪಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
ಬೆಳಗಾವಿಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ದ್ವೇಷ ಭಾಷಣ ತಡೆ ಮಸೂದೆ ಸೇರಿದಂತೆ ಹಲವು ಮಹತ್ವದ ಮಸೂದೆಗಳಿಗೆ ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಅಂಕಿತ ಹಾಕಲಾಗಿತ್ತು. ಈ ಮಸೂದೆಗಳನ್ನು ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಲಾಗಿತ್ತು. ಆದರೇ ಇನ್ನೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿಲ್ಲ.
ರಾಜ್ಯಪಾಲರ ಪರಿಶೀಲನೆಯಲ್ಲೇ ದ್ವೇಷ ಭಾಷಣ ತಡೆ ಮಸೂದೆ ಇದೆ. ಇದಲ್ಲದೇ ಎಸ್ಸಿ ಒಳಮೀಸಲಾತಿ ಮಸೂದೆಯನ್ನು ರಾಜ್ಯಪಾಲರು ವಾಪಾಸ್ ಕಳುಹಿಸಿದ್ದಾರೆ. ಮಸೂದೆ ಕುರಿತು ಹೆಚ್ಚಿನ ಸ್ಪಷ್ಟೀಕರಣವನ್ನು ರಾಜ್ಯಪಾಲರು ಕೋರಿದ್ದಾರೆ. ಇದಲ್ಲದೇ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬಿಲ್ ಕೂಡ ವಾಪಾಸ್ ಕಳುಹಿಸಲಾಗಿದೆ. ಇನ್ನುಳಿದ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.








