ಬೆಂಗಳೂರು: ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ ಮತ್ತು ನಗರ ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಯಲಿ ಬರುವ ಖಾಸಗಿ ಬಡಾವಣೆಗಳ ಅನುಮೋದನೆಯನ್ನು ಇನ್ನು ಮುಂದೆ ಸರ್ಕಾರದ ಸಹಮತಿ ಪಡೆಯಬೇಕು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಶ್ರೀ ಬಿ. ಎಸ್. ಸುರೇಶ (ಬೈರತಿ) ಅವರು ಸೂಚಿಸಿದ್ದಾರೆ.
ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು/ಯೋಜನಾ ಪ್ರಾಧಿಕಾರಗಳು ಸಾಧಿಸಿರುವ ಪ್ರಗತಿ ಕುರಿತಂತೆ ವಿಕಾಸಸೌಧದಲ್ಲಿ ಇಂದು ಪರಿಶೀಲನಾ ಸಭೆ ನಡೆಸಿದ ಸಚಿವರಾದ ಶ್ರೀ ಬಿ. ಎಸ್. ಸುರೇಶ (ಬೈರತಿ) ಅವರು ಖಾಸಗಿಯವರು ಭೂಮಿಯನ್ನು ಹೊಂದಿ/ಖರೀದಿಸಿ ಬಡಾವಣೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿರುವಾಗ ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಅದು ಏಕೆ ಸಾಧ್ಯವಾಗುತ್ತಿಲ್ಲವೆಂದು ಅಧಿಕಾರಿಗಳನ್ನು ಸಚಿವರಾದ ಬೈರತಿ ಸುರೇಶ ಅವರು ಪ್ರಶ್ನಿಸಿದರು.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆಯನ್ನು ರಚಿಸಿರುವುದು ಪ್ರಾಧಿಕಾರಗಳು ಬಡಾವಣೆಗಳನ್ನು ನಿರ್ಮಿಸಿ ರಾಜ್ಯದ ಜನ ಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ನಿವೇಶನಗಳು ಸಿಗುವಂತಾಗಲಿ ಎನ್ನುವ ಉದ್ದೇಶದಿಂದಲೇ ಹೊರತು ಖಾಸಗಿ ಬಡಾವಣೆಗಳ ನಿರ್ಮಾಣ ಮತ್ತು ನಕ್ಷೆ ಅನುಮೋದನೆ ನೀಡಲು ಅಲ್ಲ ಎಂದು ಸಚಿವರು ಖಾರವಾಗಿ ನುಡಿದರು
ಖಾಸಗಿ ಬಡಾವಣೆಗಳ ನಿರ್ಮಾಣಕ್ಕೆ ಒಂದು ರೀತಿಯ ನಿಯಮಗಳು ಅನ್ವಯಿಸಿದರೆ ಸರ್ಕಾರದ ವತಿಯಿಂದ (ನಗರಾಭಿವೃದ್ಧಿ ಪ್ರಾಧಿಕಾರಗಳ ವತಿಯಿಂದ) ನಿರ್ಮಾಣಕ್ಕೆ ಒಂದು ರೀತಿಯ ನಿಯಮಗಳಿವೆ. ಇದು ತಾರತಮ್ಯದಿಂದ ಕೂಡಿದೆ ಹೀಗಾಗಿ ಎಲ್ಲದಕ್ಕು ಅನ್ವಯವಾಗುವಂತೆ ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯವರಿಗೆ ಮಾನ್ಯ ಸಚಿವರು ಸೂಚಿಸಿದರು.
ರೈತರ ಮನ ಒಲಿಸಿ ಅವರಿಂದ ಜಮೀನು ಪಡೆದು 50:50 ಅನುಪಾತದ ಅಡಿಯಲ್ಲಿ ಅಭಿವೃದ್ಧಿ ಪಡಿಸಿ ಸಾಮಾನ್ಯ ಜನರಿಗೆ ಲಭ್ಯವಾಗುವಂತೆ ಮಾಡುವುದು ಪ್ರಾಧಿಕಾರಗಳ ಕೆಲಸ ಅದನ್ನು ಬಿಟ್ಟು ಖಾಸಗಿ ಬಡಾವಣೆ ನಿರ್ಮಾಣ ಮತ್ತು ನಕ್ಷೆ ಅನುಮೋದನೆ ನೀಡುವುದಷ್ಟೆ ಕೆಲಸವಲ್ಲ ಎಂದು ಸಚಿವರು ಕಿಡಿಖಾರಿದರು.
ಇದರಿಂದಾಗಿ ಖಾಸಗಿ ಬಡಾವಣೆಗಳ ನಿರ್ಮಾಣವು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಯನ್ವಯ ನಾಗರಿಕ ಸೌಲಭ್ಯ ನಿವೇಶನ ಮೀಸಲು, ಒಳಚರಂಡಿ ವ್ಯವಸ್ಥೆ, ಉದ್ಯಾನವನ, ರಸ್ತೆಗಳ ನಿರ್ಮಾಣ ನಿಯಮಾವಳಿಗಳಂತೆ ಖಾಸಗಿ ಬಡಾವಣೆಗಳಲ್ಲಿ ತರಲು ಸಾಧ್ಯವಿದೆ ಎಂದು ಹೇಳಿದ ಸಚಿವರು ಸರ್ಕಾರದ ವತಿಯಿಂದ ಅಂದರೆ ನಗರಾಭಿವೃದ್ಧಿ ಪ್ರಾಧಿಕಾರಗಳು /ನಗರ ಯೋಜನಾ ಪ್ರಾಧಿಕಾರಗಳ ವತಿಯಿಂದ ಬಡಾವಣೆಗಳು ನಿರ್ಮಾಣವಾದರೆ. ಆ ಜಮೀನುಗಳಲ್ಲಿ ತಕಾರರು/ವ್ಯಾಜ್ಯಗಳು ಇರುವುದಿಲ್ಲ ನಕ್ಷೆ ಕಾನೂನು ರೀತಿಯಲ್ಲಿ ಇರುತ್ತದೆ. ಇದರ ಜೊತೆಗೆ ಸರ್ಕಾರದ/ನಗರಾಭಿವೃದ್ಧಿ ಪ್ರಾಧಿಕಾರಗಳ ಮೇಲೆ ಜನ ಸಾಮಾನ್ಯರಿಗೆ ಗೌರವ ಹೆಚ್ಚಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಚಿವರಾದ ಬೈರತಿ ಸುರೇಶ ಅವರು ರಾಜ್ಯದಲ್ಲಿ ಖಾಸಗಿಯವರು ಬಡಾವಣೆಗಳನ್ನು ನಿರ್ಮಿಸಿ ಸಾವಿರಾರು ನಿವೇಶನಗಳನ್ನು ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುವಾಗ ಪ್ರಾಧಿಕಾರಗಳ ಆಯುಕ್ತರು ಮತ್ತು ನಗರ ಯೋಜಕ ಸದಸ್ಯರುಗಳಾದ ತಮ್ಮ ಕೈಯಲ್ಲಿ ಏಕೆ ಸಾಧ್ಯವಾಗುತ್ತಿಲ್ಲವೆಂದು ಪ್ರಶ್ನಿಸಿದರು.
ಜಮೀನು ಕೊಡಲು ಮುಂದೆ ಬರುವ ರೈತರನ್ನು ಸಂಪರ್ಕಿಸಿ ಇಲ್ಲದೆ ಇದ್ದಾಗ ನೀವೆ ಮುಂದೆ ಹೋಗಿ ರೈತರ ಮನ ಒಲಿಸಿ ಜಮೀನನ್ನು ಪಡೆಯಿರಿ ಇದು ಯಾವುದು ಇಲ್ಲದ ಸಂದರ್ಭದಲ್ಲಿ ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರದಿಂದ ಅವಕಾಶವಿದೆ. ಇವುಗಳನ್ನು ಬಳಸಿಕೊಂಡು ಬಡಾವಣೆಗಳನ್ನು ನಿರ್ಮಾಣ ಮಾಡಬೇಕು ಎಂದು ಸಚಿವರಾದ ಬೈರತಿ ಸುರೇಶ ಅವರು ತಾಕೀತು ಮಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರಗಳು/ಯೋಜನಾ ಪ್ರಾಧಿಕಾರಗಳಲ್ಲಿ ಇರುವ ಹಣವನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಹೆಚ್ಚಿನ ಹಣವಿದೆ ಎಂದು ಬಡ್ಡಿಗಾಗಿ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಡಬಾರದು ಪ್ರಾಧಿಕಾರಗಳಲ್ಲಿರುವ ಹಣವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಂಡರೆ ಬಡಾವಣೆಗಳನ್ನು ನಿರ್ಮಿಸುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದ ಸಚಿವರಾದ ಬೈರತಿ ಸುರೇಶ ಅವರು ಮತ್ತೆ ಮೂರು ತಿಂಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸಲಾಗುತ್ತದೆ ಅಷ್ಟರಲ್ಲಿ ಪಗ್ರತಿಯನ್ನು ಸಾಧಿಸಿರಬೇಕು ಎಂದು ಸಭೆಯಲ್ಲಿ ಹಾಜರಿದ್ದ ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರು ಮತ್ತು ನಗರ ಯೋಜಕ ಸದಸ್ಯರು/ಕಾರ್ಯದರ್ಶಿಗಳಿಗೆ ಸೂಚಿಸಿದರು.
ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತರಾದ ಎನ್. ವೆಂಕಟಾಚಲಪತಿ, ನಗರ ಮತ್ತು ಗ್ರಾಮಾಂತರ ಯೋಜನೆ ನಿರ್ದೇಶಕರಾದ ತಿಪ್ಪೇಸ್ವಾಮಿ, ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿಯಾದ ಕೃಷ್ಣಮೂರ್ತಿ ಸೇರಿದಂತೆ ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ (ಬೆಂಗಳೂರು ಹೊರತುಪಡಿಸಿ) ಆಯುಕ್ತರು, ನಗರ ಯೋಜಕ ಸದಸ್ಯರು/ಕಾರ್ಯದರ್ಶಿಗಳು ಉಪಸ್ಥಿತರಿದ್ದರು.