ಬೆಂಗಳೂರು : ರಾಜ್ಯದಲ್ಲಿ ‘ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ’ ಆಯೋಜಿಸಲು ಸರ್ಕಾರ ಮಾರ್ಗಸೂಚಿ ಪ್ರಕಟ ಮಾಡಿದೆ. ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳಿಗೆ ಬೇಸಿಗೆ ರಜೆ ಸಮಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ ಮಕ್ಕಳ ಬೌದ್ಧಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮೂಲಕ 9 ದಿನಗಳ ಮಕ್ಕಳ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಮಕ್ಕಳ ಬೇಸಿಗೆ ಶಿಬಿರವನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯದ ಗ್ರಂಥಾಲಯ ಮೇಲ್ವಿಚಾರಕರ ಸುಗಮಗಾರಿಕೆಯಲ್ಲಿ ಆಯಾ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದ ಶಾಲೆ ಅಥವಾ ಗ್ರಂಥಾಲಯದಲ್ಲಿ ಹಮ್ಮಿಕೊಳ್ಳುವುದು.
ಏನಿದೆ ಮಾರ್ಗಸೂಚಿಯಲ್ಲಿ.?
ಎರಡು ವಾರದ ಬೇಸಿಗೆ ಶಿಬಿರದ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸ, ಅಂಕಿಸಂಖ್ಯೆ ಮತ್ತು ವಿಜ್ಞಾನ ವಿಷಯಗಳು, ನೈತಿಕತೆ ಮತ್ತು ನಾಯಕತ್ವ ವಿಷಯಗಳು ಮತ್ತು ಕಾರ್ಯಯೋಜನೆಗಳನ್ನು ರೂಪಿಸುವ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಚಟುವಟಿಕೆಗಳನ್ನು ಕೈಗೊಳ್ಳುವುದು. ಹೀಗೆ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವುದು, ಗ್ರಾಮೀಣ ಬದುಕಿನ ದೈನಂದಿನ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಅರ್ಥಮಾಡಿಸುವುದು ಇತ್ಯಾದಿಗಳ ಜೊತೆಗೆ ಬೇಸಿಗೆಯ ರಜಾ ದಿನಗಳನ್ನು ಸಂತೋಷದಿಂದ ಮಕ್ಕಳು ಬಳಸಿಕೊಳ್ಳುವುದು.
ಅನುಷ್ಠಾನ:
: ದಿನಾಂಕ 19-05-2023 80 27-05-2023
ಶಿಬಿರದ ಸಮಯ: ಬೆಳಿಗ್ಗೆ 10.00ರಿಂದ 01.30ಗಂಟೆಯವರೆಗೆ
ಶಿಬಿರದಲ್ಲಿ ಭಾಗವಹಿಸುವ ಮಕ್ಕಳ ಸಂಖ್ಯೆ: 40
ಶಿಬಿರದಲ್ಲಿ ಭಾಗವಹಿಸುವ ಮಕ್ಕಳ ವಯಸ್ಸು: 8 ರಿಂದ 13
ಶಿಬಿರದ ಸ್ಥಳ : ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದ ಸರ್ಕಾರಿ ಶಾಲೆ ಅಥವಾ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ.
ಪೂರ್ವ ಸಿದ್ಧತೆ
ಶಾಲೆಯ ಸಹಯೋಗದಲ್ಲಿ ಪೋಷಕರನ್ನು ಸಂಪರ್ಕಿಸಿ ಶಿಬಿರಕ್ಕೆ ಮಕ್ಕಳನ್ನು ಆಯ್ಕೆ ಮಾಡುವುದು ಮತ್ತು ಪೋಷಕರ ಒಪ್ಪಿಗೆ (ಪತ್ರದ ಮುಖೇನ) ಪಡೆಯುವುದು.
ಶಿಬಿರಕ್ಕೆ 40 ಕ್ಕಿಂತ ಹೆಚ್ಚು ಮಕ್ಕಳು ನೋಂದಣಿಯಾದಲ್ಲಿ ಆಯ್ಕೆಯನ್ನು ಲಾಟರಿ ಮೂಲಕ ಮಾಡುವುದು.
ಶಿಬಿರ ನಡೆಯುವ ಸ್ಥಳದಲ್ಲಿ ಹೊಸದಾದ ಪ್ರಥಮ ಚಿಕಿತ್ಸಾ ಪೆಟ್ಟಿಗೆಯು ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳುವುದು.
ಗ್ರಾಮ ಪಂಚಾಯಿತಿ ಅಧ್ಯಕ್ಷರು/ಸದಸ್ಯರು/ಸ್ವಸಹಾಯ ಸಂಘಗಳು/ಯುವಕ ಸಂಘಗಳು/ಮುಖಂಡರು ಮುಂತಾದವರನ್ನು ಸಂಪರ್ಕಿಸಿ ಸಹಕಾರವನ್ನು ಪಡೆಯುವುದು.ಮಗುವು ಪ್ರತಿ ದಿನ ಮನೆಯಿಂದ ಲಘು ಉಪಹಾರ ಮತ್ತು ನೀರನ್ನು ತರುವಂತೆ ಪೋಷಕರ ಗಮನಕ್ಕೆ ತರುವುದು.
ಶಿಬಿರಕ್ಕೆ, ಮಗುವನ್ನು ಕರೆತರುವುದು ಮತ್ತು ಕರೆದುಕೊಂಡು ಹೋಗುವುದು ಪೋಷಕರ ಜವಾಬ್ದಾರಿಯಾಗಿದೆ.
ಬೇಸಿಗೆ ಶಿಬಿರವನ್ನು ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಅನುಷ್ಠಾನಗೊಳಿಸುವುದು. ಈ ಸಂಬಂಧ ಬೇಸಿಗೆ ಶಿಬಿರಕ್ಕೆ ಅಗತ್ಯವಿರುವ ಆಡಳಿತಾತ್ಮಕ ಸಹಕಾರವನ್ನು ಒದಗಿಸುವುದು. ಶಿಬಿರಕ್ಕೆ ಪೂರಕವಾಗಿ ಬೇಕಾಗಿರುವ ಅಗತ್ಯ ಸಾಮಗ್ರಿಗಳನ್ನು ಗ್ರಾಮ ಪಂಚಾಯಿತಿಯಿಂದ ಪೂರೈಸುವುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಲ್ಲಿ ಉಪಕರಣಗಳು ಲಭ್ಯವಿದ್ದಲ್ಲಿ ಮುಖ್ಯ ಶಿಕ್ಷಕರೊಂದಿಗೆ ಸಮನ್ವಯತೆ ಸಾಧಿಸಿ ಶಿಬಿರದ ಅವಧಿಯಲ್ಲಿ ಉಪಕರಣಗಳನ್ನು ಬಳಸಿಕೊಳ್ಳುವುದು.
ಗ್ರಂಥಾಲಯದ ಮೇಲ್ವಿಚಾರಕರು ಸದರಿ ಬೇಸಿಗೆ ಶಿಬಿರದ ಸುಗಮಗಾರರಾಗಿ ಕಾರ್ಯನಿರ್ವಹಿಸುವುದು.
ಶಿಬಿರದಲ್ಲಿ ವಿಜ್ಞಾನ ಮತ್ತು ಗಣಿತದ ಚಟುವಟಿಕೆಗಳನ್ನು ನಡೆಸಲು ಸ್ಥಳೀಯ ಶಾಲೆಯ ಶಿಕ್ಷಕರನ್ನು/ಸ್ವಯಂ ಪ್ರೇರಿತ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳುವುದು.
ಸ್ಥಳೀಯ ಕಲಾವಿದರನ್ನು ಗುರುತಿಸಿ ಅವರ ಮೂಲಕ ಮಕ್ಕಳಿಗೆ ಸ್ಥಳೀಯ ಕಲಾ ಪ್ರಕಾರಗಳನ್ನು ಪರಿಚಯ ಮಾಡಿಸುವುದು.
ಬೇಸಿಗೆ ಶಿಬಿರ ನಡೆಯುವ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಮತ್ತು ಶುಚಿತ್ವ ಇರುವಂತೆ ನೋಡಿಕೊಳ್ಳುವುದು.
ಶಿಬಿರದ ಕೊನೆಯ ದಿನ ಮಕ್ಕಳೇ ಶಿಬಿರದ ಸಮಾರೋಪ ಸಮಾರಂಭವನ್ನು ಆಯೋಜಿಸುವಂತೆ ಮತ್ತು ನಿರ್ವಹಿಸುವಂತೆ ವ್ಯವಸ್ಥೆ ಮಾಡುವುದು. ಮಕ್ಕಳಿಂದಲೇ ಬರೆಯಲ್ಪಟ್ಟ ಆಹ್ವಾನ ಪತ್ರಿಕೆಗಳನ್ನು ಬಳಸುವುದು.ಸಮಾರಂಭಕ್ಕೆ ಬೇಕಾಗುವ ಪೂರಕ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿಯು ಒದಗಿಸುವುದು.
ಶಿಬಿರದಲ್ಲಿ ಮಕ್ಕಳ ಕಲಿತ ವಿಶೇಷ ಚಟುವಟಿಕೆಗಳನ್ನು ಮತ್ತು ಯೋಜನಾ ಕಾರ್ಯಗಳನ್ನು ಚುನಾಯಿತಿ ಪ್ರತಿನಿಧಿಗಳು, ಪೋಷಕರು, ಗ್ರಾಮ ಪಂಚಾಯಿತಿ ಶಿಕ್ಷಣ ಕಾರ್ಯಪಡೆಯ ಸದಸ್ಯರು, ಸಮುದಾಯ ಮುಖಂಡರ ಸಮ್ಮುಖದಲ್ಲಿ ಪ್ರಸ್ತುತ ಪಡಿಸುವಂತೆ ನೋಡಿಕೊಳ್ಳುವುದು.