ಬೆಂಗಳೂರು : ರಾಜ್ಯದಲ್ಲಿ ಗ್ರಾಮ ಸಭೆ ಕರೆಯಲು ನಡೆಸಲು ರಾಜ್ಯ ಸರ್ಕಾರವು ಮಾರ್ಗಸೂಚಿ ಪ್ರಕಟಿಸಿದ್ದು, ಈ ನಿಯಮಗಳ ಪಾಲನೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ 1993 (1993ರ ಕರ್ನಾಟಕ ಆಧಿನಿಯಮ ಸಂಖ್ಯೆ:14)ರ ಪ್ರಕರಣ 3ಇ ಉಪಬಂಧಗಳಲ್ಲಿನ ಉದ್ದೇಶಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ ಪ್ರಕರಣ 311ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಕಂಡ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಸಭೆ ಕರೆಯುವ ಮತ್ತು ನಡೆಸುವು ನಿಯಮಗಳು, 2024ರ ಕರಡನ್ನು ದಿನಾಂಕ:07.12.2024 ಕರ್ನಾಟಕ ರಾಜ್ಯ ಪತ್ರದ ಭಾಗ-4ಎ ರಲ್ಲಿ ಪ್ರಕಟಿಸಿ ಅದರಿಂದ ಬಾಧಿತರಾಗುವ ವ್ಯಕ್ತಿಗಳಿಂದ ಸದರಿ ಕರಡಿಗೆ ಆಕ್ಷೇಪಣೆ ಅಥವಾ ಸಲಹೆಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಸಲ್ಲಿಸಬೇಕೆಂದು ಕೋರಿರುವುದರಿಂದ;
ಮತ್ತು ಸದರಿ ರಾಜ್ಯ ಪತ್ರವು ಸಾರ್ವಜನಿಕರಿಗೆ ದಿನಾಂಕ:07.12.2024 ರಂದು ಲಭ್ಯವಾಗುವಂತೆ ಮಾಡಿರುವುದರಿಂದ;
ಮತ್ತು ಸದರಿ ಕರಡಿನ ಸಂಬಂಧದಲ್ಲಿ ರಾಜ್ಯ ಸರ್ಕಾರಕ್ಕೆ ಸ್ವೀಕೃತವಾದ ಆಕ್ಷೇಪಣೆ ಅಥವಾ ಸಲಹೆಗಳನ್ನು ಪರಿಗಣಿಸಿರುವುದರಿಂದ;
ಈಗ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ 1993 (1993ರ ಕರ್ನಾಟಕ ಆಧಿನಿಯಮ ಸಂಖ್ಯೆ:14)ರ ಪ್ರಕರಣ 3ಇ ಉಪಬಂಧಗಳಲ್ಲಿನ ಉದ್ದೇಶಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ ಪ್ರಕರಣ 311ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ನಿಯಮಗಳನ್ನು ರಚಿಸುತ್ತದೆ, ಎಂದರೆ:-
ನಿಯಮಗಳು
1. ಹೆಸರು ಮತ್ತು ಪ್ರಾರಂಭ:-
1. ಈ ನಿಯಮಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್, (ಗ್ರಾಮ ಸಭೆ ಕರೆಯುವ ಮತ್ತು ನಡೆಸುವ) ನಿಯಮಗಳು, 2024 ಎಂದು ಕರೆಯತಕ್ಕದ್ದು.
II. ಈ ನಿಯಮಗಳು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
2. ಪರಿಭಾಷೆಗಳು:- (1) ಈ ನಿಯಮಗಳ ವಿಷಯಕ್ಕೆ ಅಥವಾ ಸಂದರ್ಭಕ್ಕೆ ಬೇರೆ ಅರ್ಥದ ಅಗತ್ಯ ಇರದಿದ್ದರೆ-
1. “ಅಧಿನಿಯಮ” ಎಂದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ 14);
II. “ಅಧ್ಯಕ್ಷರು” ಎಂದರೆ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಯಾರು ವಹಿಸುತ್ತಾರೊ ಅಂತಹ ಗ್ರಾಮ ಪಂಚಾಯತಿಯ ಸದಸ್ಯ
“ಗ್ರಾಮ ಸಭೆಯ ಸದಸ್ಯರು” ಎಂದರೆ ಸಂಬಂಧಿತ ಗ್ರಾಮ ಪಂಚಾಯತಿ ಪ್ರದೇಶದ ಒಳಗೆ ಇರುವ ಗ್ರಾಮಕ್ಕೆ ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ ನೋಂದಾಯಿತ ವ್ಯಕ್ತಿಗಳು;
IV. “ಗ್ರಾಮ” ಎಂದರೆ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಕಂದಾಯ ಗ್ರಾಮ;
V. “ವರ್ಷ” ಎಂದರೆ ಒಂದು ಆರ್ಥಿಕ ವರ್ಷ (ಎಪ್ರಿಲ್ 01 ರಿಂದ ಮಾರ್ಚ್ 31 ರವರೆಗೆ);
VI. “ಕಾರ್ಯನಿರ್ವಾಹಕ ಅಧಿಕಾರಿ” ಎಂದರೆ:- ಸಂಬಂಧಿಸಿದ ತಾಲ್ಲೂಕ್ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ;
VII. “ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ” ಎಂದರೆ:- ಸಂಬಂಧಿಸಿದ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ; ಮತ್ತು
VIII. ಸರ್ಕಾರ” ಎಂದರೆ ಕರ್ನಾಟಕ ರಾಜ್ಯ ಸರ್ಕಾರ.
(2) ಈ ನಿಯಮಗಳಲ್ಲಿ ಉಲ್ಲೇಖಿಸಿರುವ ಇನ್ನಿತರೆ ಪದಗಳ ಅರ್ಥವು ಅಧಿನಿಯಮಗಳಲ್ಲಿ ಉಪಬಂಧಿಸಿರುವ ಅರ್ಥವನ್ನು ಹೊಂದಿರುತ್ತವೆ.
3. ಗ್ರಾಮ ಸಭೆ ಕರೆಯುವುದು ಮತ್ತು ನಡೆಸುವುದು:
1. ಪ್ರತಿ ಕಂದಾಯ ಗ್ರಾಮ ಹಾಗೂ ಅದರಡಿಯ ಉಪಗ್ರಾಮಗಳ ಗ್ರಾಮ ಸಭೆಯನ್ನು ವರ್ಷದಲ್ಲಿ ನಾಲ್ಕು ಬಾರಿ ಕರೆಯತಕ್ಕದ್ದು.
ಪರಂತು ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯಡಿಯಲ್ಲಿ ಬರುವ ಕಂದಾಯ ಗ್ರಾಮಗಳಲ್ಲಿ ವಾಸಿಸುವ ಮನೆಗಳು ಕಡಿಮೆ ಇರುವ ಕಾರಣ ಸಮೀಪದಲ್ಲಿರುವ ಮತ್ತೊಂದು ಕಂದಾಯ ಗ್ರಾಮವನ್ನು ಸೇರಿಸಿಕೊಂಡು ಗ್ರಾಮ ಸಭೆಯನ್ನು ನಡೆಸುವುದು
i . ಸಾಮಾನ್ಯ ಗ್ರಾಮ ಸಭೆಗಳು:- ಎಪ್ರಿಲ್ 24 ಮತ್ತು ಅಕ್ಟೋಬರ್-02 ಅನ್ನು
ಹೊರತುಪಡಿಸಿ, ತದನಂತರ ಏಳು ಕೆಲಸದ ದಿನಗಳ ಕಾಲಾವಧಿಯಲ್ಲಿ ಪ್ರತಿ ಕಂದಾಯ ಗ್ರಾಮದಲ್ಲಿ ಗ್ರಾಮ ಸಭಾ ದಿನಾಂಕಗಳನ್ನು ನಿಗಧಿಪಡಿಸತಕ್ಕದ್ದು
ii. ವಿಶೇಷ ಸಭೆಗಳು:- ಆಗಸ್ಟ್-15 ಮತ್ತು ಜನವರಿ 26 ಅನ್ನು ಹೊರತುಪಡಿಸಿ, ತದನಂತರ ಏಳು ಕೆಲಸದ ದಿನಗಳ ಕಾಲಾವಧಿಯಲ್ಲಿ ಪ್ರತಿ ಕಂದಾಯ ಗ್ರಾಮದಲ್ಲಿ ವಿಶೇಷ ಗ್ರಾಮ ಸಭಾ ದಿನಾಂಕಗಳನ್ನು ನಿಗಧಿಪಡಿಸತಕ್ಕದ್ದು.
2. ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮ ಪಂಚಾಯತಿಯ ಅಧ್ಯಕ್ಷರ ಜೊತೆ ಚರ್ಚಿಸಿ, ಗ್ರಾಮ ಸಭೆಗೆ ಅಧಿಕಾರಿಗಳನ್ನು ನಿಯೋಜಿಸತಕ್ಕದ್ದು.
3. ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರು ವಹಿಸತಕ್ಕದ್ದು. ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು ಅಧ್ಯಕ್ಷತೆಯನ್ನು ವಹಿಸತಕ್ಕದ್ದು. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅನುಪಸ್ಥಿತಿಯಲ್ಲಿ ಕಂದಾಯ ಗ್ರಾಮದ ವ್ಯಾಪ್ತಿಯಲ್ಲಿ ಚುನಾಯಿತನಾದ ಹಿರಿಯ ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮ ಸಭೆಯ ಅಧ್ಯಕ್ಷತೆಯನ್ನು ವಹಿಸುವುದು. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಅನುಪಸ್ಥಿತಿಯಲ್ಲಿ ಗ್ರಾಮ ಸಭೆ ಆಯ್ಕೆ ಮಾಡಿದ ಒಬ್ಬರು ಅಧ್ಯಕ್ಷತೆಯನ್ನು ವಹಿಸುವುದು,
4. ಗ್ರಾಮ ಸಭಾದಲ್ಲಿರುವ ಒಟ್ಟು ಮತದಾರರ ಶೇ 10 ರಷ್ಟು ಅಥವಾ 100 ಸದಸ್ಯರು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಂಖ್ಯೆ ಕೋರಂ ಆಗಿರುತ್ತದೆ.
5. ಸಭೆಗೆ ನಿಗಧಿಪಡಿಸಿದ ಸಮಯದಲ್ಲಿ ಕೋರಂ ಇಲ್ಲದಿದ್ದರೆ, ಅಧ್ಯಕ್ಷತೆ ವಹಿಸಿರುವ ವ್ಯಕ್ತಿಯು ಮೂವತ್ತು ನಿಮಿಷಗಳ ಕಾಲಾವಕಾಶವನ್ನು ನೀಡಿ ಕಾಯತಕ್ಕದ್ದು.
6. ಮೂವತ್ತು ನಿಮಿಷದ ನಂತರವೂ ಕೋರಂ ಇಲ್ಲದಿದ್ದರೆ ಅಧ್ಯಕ್ಷತೆ ವಹಿಸಿರುವ ವ್ಯಕ್ತಿಯು ಸಾರ್ವಜನಿಕ ರಜಾ ದಿನ ಅಲ್ಲದ ಮುಂದಿನ ದಿನಕ್ಕೆ ಅಥವಾ ಮೂರು ಕೆಲಸದ ದಿನದೊಳಗೆ ಮತ್ತೊಂದು ದಿನಾಂಕಕ್ಕೆ ಸಭೆಯನ್ನು ಮುಂದೂಡತಕ್ಕದ್ದು.
7. ಮುಂದೂಡಲ್ಪಟ್ಟ ಸಭೆಗೆ ಕೋರಂ ಅವಶ್ಯಕತೆ ಇರುವುದಿಲ್ಲ.
8. ಒಂದು ವರ್ಷದಲ್ಲಿ ಪ್ರತಿ ಕಂದಾಯ ಗ್ರಾಮದಲ್ಲಿ ಒಂದು ಬಾರಿ ಕರೆಯಲಾಗುವ ವಿಶೇಷ ಮಹಿಳಾ, ಮಕ್ಕಳ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳು ಮತ್ತು ವಿಶೇಷ ಚೇತನರು ಹಾಗೂ ವಿವಿಧ ದುರ್ಬಲ ವರ್ಗಗಳ ಗ್ರಾಮ ಸಭೆಗಳನ್ನು ಪ್ರತ್ಯೇಕವಾಗಿ ಸಮಯ ನಿಗದಿ ಪಡಿಸಿ ಮತ್ತು ಸಭೆ ನಡೆಸಿ, ಚರ್ಚಿಸಿದ ನಿರ್ಣಯಗಳನ್ನು ಯಥಾವತ್ತಾಗಿ ಇಲಾಖೆಗಳು ಕಾರ್ಯಗತಗೊಳಿಸತಕ್ಕದ್ದು.
4. ಗ್ರಾಮ ಸಭೆ ಕರೆಯುವ ವಿಧಾನ:
ಗ್ರಾಮ ಸಭೆಯ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಸರ್ಕಾರವು ಅಭಿವೃದ್ಧಿ ಪಡಿಸಿರುವ ತಂತ್ರಾಂಶದ ಮೂಲಕ ನಿರ್ವಹಿಸುವುದು 1)
2) ಗ್ರಾಮ ಸಭಾದ ನೋಟಿಸ್ ನಮೂನೆ-1 ರಲ್ಲಿ ನಿಗದಿ ಪಡಿಸಿದಂತಿರಬೇಕು.
3) ಗ್ರಾಮ ಸಭೆಯ ದಿನಾಂಕದಿಂದ ಏಳು ದಿನ ಮುಂಚಿತವಾಗಿ ಗ್ರಾಮ ಸಭಾ ನೋಟಿಸನ್ನು ಹೊರಡಿಸತಕ್ಕದ್ದು.
4) ಮುದ್ರಿತ ಮತ್ತು ವಿದ್ಯುನ್ಮಾನ (electronically) ಗ್ರಾಮ ಸಭಾ ನೋಟೀಸ್‌ನ್ನು ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರಿಗೆ ತಲುಪಿಸಬೇಕು.










