ಬೆಂಗಳೂರು : ರಾಜ್ಯದ ಎಲ್ಲಾ ಗ್ರಾಮಪಂಚಾಯಿತಿ ಸಿಬ್ಬಂದಿಗಳು ಪಂಚತಂತ್ರ 2.0 ಮೊಬೈಲ್ ಆಪ್ ಮೂಲಕ ಇ-ಹಾಜರಾತಿಯನ್ನು ದಾಖಲಿಸಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಸಿಬ್ಬಂದಿಗಳು (ಕರವಸೂಲಿಗಾರರು, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್/ ಡಾಟಾ ಎಂಟ್ರಿ ಆಪರೇಟರ್, ಸ್ವಚ್ಛತಾಗಾರರು, ನೀರುಗಂಟಿಗಳು) ಪ್ರತಿದಿನ ಪಂಚತಂತ್ರ 2.0 ತಂತ್ರಾಂಶದಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್- ಹಾಜರಾತಿಯನ್ನು ದಾಖಲಿಸುವಂತೆ ಹಾಗೂ ಸದರಿಯವರ ಪ್ರತಿ ಮಾಹೆಯ ವೇತನವನ್ನು ಬಯೋಮೆಟ್ರಿಕ್ ಹಾಜರಾತಿಯ ಆಧಾರದ ಮೇಲೆ ಪಾವತಿಸುವಂತೆ ಉಲ್ಲೇಖಿತ ಪತ್ರದಲ್ಲಿ ತಿಳಿಸಲಾಗಿತ್ತು.
ಮುಂದುವರೆದು, ಕರವಸೂಲಿಗಾರರು, ಸ್ವಚ್ಛತಾಗಾರರು ಮತ್ತು ನೀರುಗಂಟಿಗಳ ಕರ್ತವ್ಯವು ಕ್ಷೇತ್ರದಲ್ಲಿರುವುದರಿಂದ, ಇವರುಗಳು ನಿಗದಿತ ಸಮಯದೊಳಗೆ ಕಚೇರಿಗೆ ಹಾಜರಾಗಿ ಪಂಚತಂತ್ರ 2.0 ತಂತ್ರಾಂಶದಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ದಾಖಲಿಸುವುದು ಸಾಧ್ಯವಾಗದಿರುವುದರಿಂದ, ಇವರುಗಳಿಗೆ ಪಂಚತಂತ್ರ 2.0 ತಂತ್ರಾಂಶದಲ್ಲಿ ಬಯೋಮೆಟ್ರಿಕ್ ಹಾಜರಾತಿಯಿಂದ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.
ಅದರಂತೆ, ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕರವಸೂಲಿಗಾರರು, ಸ್ವಚ್ಛತಾಗಾರರು ಮತ್ತು ನೀರುಗಂಟೆಗಳಿಗೆ ಬಯೋಮೆಟ್ರಿಕ್ ಹಾಜರಾತಿಯಿಂದ ವಿನಾಯಿತಿ ನೀಡಿ, ಇವರುಗಳಿಗೆ ಪಂಚತಂತ್ರ 2.0 ಮೊಬೈಲ್ ಆಪ್ ಮೂಲಕ ಇ-ಹಾಜರಾತಿಯನ್ನು ದಾಖಲಿಸಲು ಅವಕಾಶವನ್ನು ಕಲ್ಪಿಸಿದ್ದು, ಅದರಂತೆ ಹಾಜರಾತಿಯನ್ನು ಕಡ್ಡಾಯವಾಗಿ ದಾಖಲಿಸಲು ಹಾಗೂ ಸದರಿಯವರುಗಳ ವೇತನವನ್ನು ಕಡ್ಡಾಯವಾಗಿ ಇ-ಹಾಜರಾತಿಯ ಆಧಾರದ ಮೇಲೆ ಪಾವತಿಸಲು ಕ್ರಮ ವಹಿಸುವಂತೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಿ ಕಾರ್ಯಗತಗೊಳಿಸಲು ತಿಳಿಸಿದೆ.