ಬೆಂಗಳೂರು: ರಾಜ್ಯದ ಎಲ್ಲಾ ಪರೀಕ್ಷಾರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದ್ದು, ಕೆ-ಸೆಟ್ ಪರೀಕ್ಷೆ ಸೇರಿ ಯಾವುದೇ ನೇಮಕಾತಿ ಪರೀಕ್ಷೆಗಳಿಗೆ ಒಮ್ಮೆ ಸಲ್ಲಿಸುವ ದಾಖಲೆಗಳು ಮುಂದಿನ ಎಲ್ಲಾ ಪರೀಕ್ಷೆಗಳಿಗೂ ಅನ್ವಯವಾಗುವಂತೆ ತಂತ್ರಾಂಶ ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಚ್ಚುವರಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಕೆ – ಸೆಟ್ 2024 ಅರ್ಹ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದ ಸಚಿವ ಡಾ.ಎಂ.ಸಿ. ಸುಧಾಕರ್, ಪರೀಕ್ಷಾರ್ಥಿಗಳು ಪ್ರತಿ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ದಾಖಲೆಗಳನ್ನು ನೀಡುವ ಬದಲು ಒಮ್ಮೆ ನೀಡಿದ ದಾಖಲೆಗಳನ್ನು ಎಲ್ಲಾ ಪರೀಕ್ಷೆಗಳಿಗೂ ಬಳಕೆಯಾಗುವಂತಹ ತಂತ್ರಾಂಶ ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕೆ-ಸೆಟ್ ಪರೀಕ್ಷೆ ಅಥವಾ ಯಾವುದೇ ನೇಮಕಾತಿ ಪರೀಕ್ಷೆಗಳಿಗೆ ಒಮ್ಮೆ ದಾಖಲಿ ಸಲ್ಲಿಸಿದವರು ಮುಂದೆ ಇನ್ನೊಂದು ಪರೀಕ್ಷೆ ಬರೆಯಲು ದಾಖಲೆ ಸಲ್ಲಿಸಬೇಕಿಲ್ಲ. ಈ ರೀತಿಯಾದ ತಂತ್ರಜ್ಞಾನವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಳವಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಇದೇ ವೇಳೆ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ CET 2025 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ ಪ್ರಕಾಶ ಪಾಟೀಲ ರವರು, ಶಾಸಕರಾದ ಶ್ರೀಕೆ ಎಂ ಶಿವಲಿಂಗೇಗೌಡ ರವರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.